ಅನುದಿನ ಕವಿತೆ-೧೫೪೫, ಕವಯಿತ್ರಿ: ಸಂಘಮಿತ್ರೆ ನಾಗರಕಟ್ಟೆ, ಕವನದ ಶೀರ್ಷಿಕೆ:ಹೀಗೊಂದು ದಿನ ಬರಬಹುದು

ಹೀಗೊಂದು ದಿನ ಬರಬಹುದು

ಸಿಡಿಮಿಡಿಗೊಂಡ ಸೂರ್ಯನನ್ನು
ಶಾಂತಗೊಳಿಸಿ ಮತ್ತೆ ಬರಲೇಳಲು
ಜನರು ಕವಿಗಳಾದ ನಮ್ಮತ್ತ
ಧಾವಿಸಿ ಬರಬಹುದು

ಬಿರಿದು ಬಾಯ್ತೆರೆದ ಇಳೆಯ
ದಾಹವನ್ನು ತಣಿಸಲು..
ನಮ್ಮ ಕವಿತೆಗಳಿಂದಲೇ
ಅವುಗಳಿಗೆ ನೀರುಣಿಸಲು
ಜನರು ನಮ್ಮತ್ತ ಧಾವಿಸಿ
ಬರಬಹುದು..

ಹೆಣ್ಣೊಬ್ಬಳ ನಾಲಗೆಯ
ಸೀಳಿದರೂ ತುಟಿಕ್ಪಿಟಿಕ್
ಎನ್ನದ ವ್ಯಾಘ್ರರ ಬಾಯಿ
ತೆರೆಸಲೂ ಇವರಿಗೆ ನಮ್ಮ
ಅಕ್ಷರ ಮತ್ತು ಕಾಗದಗಳೇ
ಬೇಕಾಗಬಹುದು..

ಹಸಿವಿದ್ದರೂ ತಾನು
ಉಣದೆ ಮನೆಮಂದಿಗೆಲ್ಲಾ
ಕಾಳು – ಕಡ್ಡಿಗಳ ತರಲು
ತಮ್ಮ ಬೆವರ ಹನಿಗಳನ್ನೇ
ನೀರಾಗಿ ದುಡಿವ ಎಷ್ಟೋ
ಅಪ್ಪಂದಿರುಗಳಿಗೆ ಕೆಲಸ
ಬೇಕಾದಾಗ ನಮ್ಮ ಪತ್ರಗಳೇ
ಬೇಕಾಗಬಹುದು..

ನಾವು ಹೀಗೆ ಬರೆಯುತ್ತಾ
ಹೋದರೆ ಜನ ನಮ್ಮನ್ನು
ನಮ್ಮ ಅಕ್ಷರಗಳನ್ನು ನಯಾ
ಪೈಸಕ್ಕೆ ಕೊಂಡುಕೊಳ್ಳಬಹುದು..

ಆದರೆ ಬರೆಯುವುದರ ಹೊರತಾಗಿ
ಬೇರೇನೂ ಬಾರದ ನಮಗೆ
ಮುಪ್ಪು ಆವರಿಸಿದಾಗ ನಮ್ಮನ್ನು
ಮನೆಯಿಂದಾಚೆಗೆ ದೂಡಬಹುದು
ಜನ ನಮ್ಮನ್ನು ಗಡಿಪಾರಾಗಿಸಬಹುದು..

ಏನ್ನನ್ನೂ ರಚಿಸಲಾಗದ ಜನರು
ನಾವಳಿದ ಮೇಲೆ ನಮ್ಮ ನರ
ಮೆದುಳು ರಕ್ತ ಮೂಳೆಗಳನ್ನೂ
ನಮ್ಮಿಂದ ನಮ್ಮದೇ ಹೊಕ್ಕುಳ
ಬಳ್ಳಿಯಂತೆ ಕತ್ತರಿಸಿ ಒಣಗಿಸಿ
ಅದಕ್ಕೊಂದು ಆಕಾರವ ಕೊಟ್ಟು
ಬುದ್ಧಿ ಪಳಗಿಸುವ ಗುಳಿಗೆಗಳನ್ನಾಗಿ
ಬಳಸಿಕೊಳ್ಳಲು ಬಹುದು …

ಮೊದಲೇ ಕವಿಗಳು ನಾವು
ಹಾಳಾದ ರೂಪಕಗಳು
ನಮ್ಮ ದೇಹಕ್ಕೂ – ಆತ್ಮಕ್ಕೂ
ಅಂಟಿಕೊಂಡಿವೆ…
ಈ ಜನರು ಅವುಗಳನ್ನೂ
ಹೆಕ್ಕಿ ತೆಗೆಯಬೇಕೆಂದರೆ
ನಮ್ಮಂತೆ ಅವರೂ ಒಮ್ಮೆ
ದೇಹದ ಮೋಹವ ಬಿಟ್ಟುಬಿಡಬೇಕು


-ಸಂಘಮಿತ್ರೆ ನಾಗರಘಟ್ಟ