ಅನುದಿನ ಕವನ-೧೫೪೬, ಕವಯಿತ್ರಿ: ಎಚ್ ಎಸ್‌ ಮುಕ್ತಾಯಕ್ಕ, ರಾಯಚೂರು, ಕವನದ ಶೀರ್ಷಿಕೆ: ಗುಲ್ಜಾರರ ಕಾವ್ಯ

ಗುಲ್ಜಾರರ ಕಾವ್ಯ…
ಮೂಲ – ಗುಲ್ಜಾರ್
ಕನ್ನಡಕ್ಕೆ – ಎಚ್. ಎಸ್. ಮುಕ್ತಾಯಕ್ಕ

1.
ಜಗತ್ತು ಆ ಕ್ಷಣ ಎಷ್ಟು
ಸುಂದರವಾಗಿ ಕಾಣುವುದು!
ಯಾರಾದರೂ ನಿನ್ನ ನೆನಪು
ತುಂಬಾ ಆಗುತ್ತದೆ ಎಂದಾಗ!

2.

ಬದುಕು ಇಂದೇಕೋ
ನನ್ನ ಮೇಲೆ ಮುನಿದಿದೆ.
ಇರಲಿಬಿಡಿ, ಇದೇನು
ಮೊದಲ ಬಾರಿಯೇನಲ್ಲ!

3.

ಬಹಳ ದಿನಗಳ ನಂತರ
ಕಂಗಳು ತುಂಬಿಬಂದವು.
ಬಹುಶಃ ಇನ್ನೂ ತುಸು
ಜೀವಂತಿಕೆ ನನ್ನಲ್ಲಿ ಉಳಿದಿದೆ!

4.
ಮಳೆ ಸುರಿಸಿದರೆ ಇದರಲ್ಲಿ
ಮೋಡಗಳದೇನೂ ತಪ್ಪಿಲ್ಲ
ಹೃದಯ ಹಗುರ
ಮಾಡಿಕೊಳುವ ಹಕ್ಕು
ಎಲ್ಲರಿಗೂ ಇಹುದು

5.
ಬಲು ಸುಂದರವಾದ
ಭ್ರಮೆ ಇತ್ತು.
ನಾನು ಆಕೆಯ ಬದುಕಿನಲ್ಲಿ
ವಿಶೇಷವಾಗಿರುವೆನೆಂದು
ತಿಳಿದಿದ್ದೆ!

6.
Online ನಲ್ಲಿ ಎಲ್ಲರೂ
ಜಾತ್ರೆಯಲ್ಲಿಹರು
Offline ನಲ್ಲಿ
ಒಂಟಿಯಾಗಿಹರು!

7.
ನಾನು ದಿನವೂ ನಗುತ್ತೇನೆ
ಆದರೆ ಖುಷಿಯಾಗಿದ್ದು
ಅವಧಿಗಳೆ ಕಳೆದವು

8.
ಎಷ್ಟೆಂದು ಬೇರೆಯವರನು
ನಗಿಸುತ್ತ, ರಮಿಸುತ್ತಲಿರುವಿರಿ.
ಯಾವಾಗಾದರೂ
ನಿಮ್ಮನ್ನು ನೀವೇ ಕೇಳಿರಿ
“ಹೇಗಿರುವೆ”ಎಂದು!

ಮೂಲ – ಗುಲ್ಜಾರ್


ಕನ್ನಡಕ್ಕೆ – ಎಚ್. ಎಸ್. ಮುಕ್ತಾಯಕ್ಕ, ರಾಯಚೂರು
—–