ಅನುದಿನ ಕವನ-೧೫೪೭, ಹಿರಿಯ‌ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೆಂದರೆ ಬರೀ ಕವಿತೆಯಲ್ಲ

ನಾನೆಂದರೆ ಬರೀ ಕವಿತೆಯಲ್ಲ

ಆಕಾಶವೆಂದರೆ ಬರೀ ನೀಲಿಯಲ್ಲ
ಕೆಂಪೋ, ಕಪ್ಪೋ …ಯಾವಾಗ ಯಾವ ಬಣ್ಣವೋ
ಬೆಂಕಿ ಕಾರುವುದೋ, ಮಿಂಚುವುದೋ
ಗುಡುಗುವುದೋ, ತಂಪು ಮಳೆಸುರಿಸುವುದೋ?

ನೆಲವೆಂದರೆ ಬರೀ ಸಪಾಟಲ್ಲ
ದಿಣ್ಣೆ, ಕೊರಕಲು, ಕಣಿವೆ.. ಎಲ್ಲಿ ಏನಿರುವುದೋ
ಕಂಪಿಸುವುದೋ, ಬಿರಿಯುವುದೋ
ನಡುಗಿಸುವುದೋ, ಬೆಳೆಯ ತೂಗಿಸುವುದೋ?

ಮರವೆಂದರೆ ಬರೀ ಹಸಿರಲ್ಲ
ಪೊಟರೆ, ಕಚ್ಚು..ಯಾವಾಗ ಬರಡಾಗುವುದೋ
ಬೋಳಾಗುವುದೋ, ಮೇಲುರುಳುವುದೋ
ಬಣ್ಣ ಬದಲಿಸುವುದೋ, ಕಾಯಿ, ಹಣ್ಣು ತೂಗುವುದೋ?

ನಾನೆಂದರೆ ಬರೀ ಕವಿತೆಯಲ್ಲ
ಒಳಗೆಷ್ಟು ಕಿತ್ತ, ಹರಿದ, ಸುಟ್ಟ ಹಾಳೆಗಳೋ
ಕಾಟು ಚಿತ್ತು ಮಾಡಿ ತಿದ್ದಿ ತೀಡಿದ ಅಕ್ಷರಗಳೋ
ಮಸಿಯೋ, ಯಾವಾಗ ಕವನವಾಗಿ ಮೈದಳೆವುದೋ

-ಎಂ ಆರ್ ಕಮಲ, ಬೆಂಗಳೂರು
—–