ಬಳ್ಳಾರಿ, ಮಾ. 28: ನಗರದ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಕಹಳೆ ಡಾಟ್ ಕಾಮ್ ಮತ್ತು ಸಂಸ್ಕೃತಿ ಪ್ರಕಾಶನ ಸಂಸ್ಥೆಗಳು ಈ ಬಾರಿಯೂ ವಿಶ್ವ ರಂಗಭೂಮಿ ದಿನವನ್ನು ವಿಶಿಷ್ಟವಾಗಿ ಆಚರಿಸಿದವು. ಮೂರು ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಸಂಡೂರಿನ ಟಿ ಎ ಕುಬೇರ್, ತಬಲ-ಮದ್ದಳೆ ವಾದಕ ನಗರದ ಹೆಚ್. ವೀರೇಶ್, ಮತ್ತು ಉದಯೋನ್ಮುಖ ರಂಗ ಕಲಾವಿದ ಕೊಳಗಲ್ಲಿನ ಎಂ. ದಕ್ಷಿಣ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿ ವರ್ಷದಂತೆ ಮೂರು ಸಂಸ್ಥೆಗಳು ಸಾಧಕ ರಂಗ ಕಲಾವಿದರ ಮನೆಯಂಗಳದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗೌರವಿಸಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್, ವೇದಿಕೆ ನೇತೃತ್ವದಲ್ಲಿ ಕಳೆದ 18 ವರ್ಷಗಳಿಂದ ಹಿರಿಯ, ಉದಯೋನ್ಮುಖ ಕಲಾವಿದರ ಮನೆಗಳಿಗೆ ತೆರಳಿ ರಂಗಗೌರವ ಸಲ್ಲಿಸುತ್ತಿದ್ದೇವೆ. ಈ ಬಾರಿಯೂ ಬಾಲ ಕಲಾವಿದರಾಗಿ ಕಲಾಕ್ಷೇತ್ರವನ್ನು ಪ್ರವೇಶಿಸಿ ಶ್ರೀಮಂತಗೊಳಿಸಿರುವ ಕುಬೇರ್,ವೀರೇಶ್ ಮತ್ತು ದಕ್ಷಿಣ ಮೂರ್ತಿ ಅವರನ್ನು ಗೌರವಿಸಲಾಗಿದೆ ಎಂದರು.
ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಸುಭದ್ರಮ್ಮ, ನಾಡೋಜ ಪದ್ಮಮ್ಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ. ನಾಗರತ್ನಮ್ಮ, ರಮೇಶಗೌಡ ಪಾಟೀಲ್, ಸುಜಾತಮ್ಮ, ಸೇರಿದಂತೆ ನೂರಾರು ಹಿರಿಯ, ಕಿರಿಯ ರಂ ಕಲಾವಿದರ ಮನೆಯಂಗಳದಲ್ಲಿ ಸನ್ಮಾನಿಸಿ ಸತ್ಕರಿಸಲಾಗಿದ್ದು, ಈ ಪರಂಪರೆಯನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಕೆ. ಜಗದೀಶ್, ರಂಗ ಕಲಾವಿದರ ಕುಟುಂಬ ಸದಸ್ಯರು, ಬಂಧು ಮಿತ್ರರು ಉಪಸ್ಥಿತರಿದ್ದು ಶುಭ ಕೋರಿದರು.
—–