ಯುಗಾದಿ
ಚೈತ್ರನ ಸಂಭ್ರಮಕೆ
ಹಸಿರು ಉಟ್ಟ ಇಳೆ
ಹೂ ತುಂಬಿ ನಗುತ್ತಿರುವ
ಮರಗಿಡ
ಚೆಲುವೆ ಪ್ರಕೃತಿಯ ಒಡಲ ತುಂಬಾ
ಬಣ್ಣ ಬಣ್ಣದ ನಕ್ಷತ್ರಗಳು
ರವಿಕಿರಣಗಳ ನೇವರಿಕೆಗೆ
ಕೋಗಿಲೆಗಳ ಇಂಪು ಸೊಂಪು
ಕಂಪೆರೆಯುತಿಹ ವಿವಿಧ
ಪುಷ್ಪಗಳ ಘಮಲು
ರೆಕ್ಕೆ ಮೂಡಿಸಿದೆ ಮುಗಿಲಿಗೆಲ್ಲಾ
ಹಕ್ಕಿಗಳ ಸಾಲು ಸಾಲು
ನೀಲ ಮೇಘನ ನರ್ತನದಲಿ
ಪಚ್ಚೆಯುಡುಗೆಯ ಭೂರಮೆಯ
ಒಲುಮೆ ನಲುಮೆ
ಮಾವು,ಹಲಸು,ಕುಂದಲಗಳ
ಸಿಹಿ ಅಂಬರದಲಿ ಸವಿಯ ಒಡಲು
ಮರುಗ,ಮಲ್ಲಿಗೆ,ಜಾಲಾರದ
ಸಾಂಗತ್ಯದಲಿ ಸಿರಿ ವೈಭವ
ಬಯಲೇ ಬಯಲಾಗುವ
ವಸಂತನ ಸಂಭ್ರಮ
ನೋವು ನಲಿವಿನ ಲೋಕಕ್ಕೆ
ಬೇವು ಬೆಲ್ಲದ ನಡಿಗೆ
ಹೊಸ ಬೆಳಕಿನ ಜಗದ
ಹಾದಿಗೆ ಸೌಹಾರ್ದವ ಹಾಸಿರಲಿ
ಮನಗಳ ಕತ್ತಲೆ ಕಳೆವ
ಮಾನವೀಯ ನಡೆ ಇರಲಿ !
-ಡಾ. ಬಿ.ಸಿ.ಶೈಲಾನಾಗರಾಜ್, ತುಮಕೂರು