ಗಜಲ್
ಬಂದ ಕೆಲಸ ಮುಗಿದ ಮೇಲೆ ನಿಲ್ಲದೆ ಹೋಗಲೇಬೇಕು
ಎಲ್ಲವನು ಕಳಚಿದ ನಂತರ ನೋಡದೆ ಹೋಗಲೇಬೇಕು
ಎದೆಯ ಬಾಂದಳದಿ ಎಷ್ಟೊಂದು ರಂಗಿನ ಕಾಮನಬಿಲ್ಲು
ಬಿಸಿಲು ಮಳೆಯು ಕರಗಿದೊಡನೆ ಇರದೆ ಹೋಗಲೇಬೇಕು
ಪುಟ್ಟ ತಲೆಯಲು ಎಷ್ಟೊಂದು ಬಯಕೆಯ ಬಾನಾಡಿಗಳು
ತೇಲುವ ಶಕ್ತಿ ಮುಗಿದೊಡನೆ ಹಾರದೆ ಹೋಗಲೇಬೇಕು
ಎಷ್ಟೊಂದು ಹೆಣೆದುಕೊಂಡಿವೆ ನೆಲದಾಳದ ಬೇರುಗಳು
ಬುವಿಯ ರುಣ ತೀರಿದೊಡನೆ ಚಿಗಿಯದೆ ಹೋಗಲೇಬೇಕು
ಪ್ರೀತಿಗಾಗಿಯೇ ಕರಗಿಹೋಗುತಿದೆ ಸಿದ್ಧನ ಮಿದು ಮನಸು
ದೀಪ ಆರಿದೊಡನೆ ಏನೂ ಯೋಚಿಸದೆ ಹೋಗಲೇಬೇಕು
-ಹಕ್ಕಿಗಳ ಚಿತ್ರ ಮತ್ತು ಗಜಲ್: ಸಿದ್ಧರಾಮ ಕೂಡ್ಲಿಗಿ
—–