ಅನುದಿನ ಕವನ-೧೫೫೨, ಕವಿ: ಎ ಎಂ ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ:ಸಿದ್ಧಗಂಗಾ ಶ್ರೀಗಳ ಸುಪ್ರಭಾತ

ಸಿದ್ಧಗಂಗಾ ಶ್ರೀಗಳ ಸುಪ್ರಭಾತ

ಸಿದ್ಧ ಗಂಗೆಯ ಸಿದ್ಧಿಪುರುಷ
ನಿನ್ನ ಸ್ಮರಣೆ ನಮಗೆ ಹರುಷ
ಬಡವರ ಬಾಳಿನ ಭಾಗ್ಯವಿಧಾತ
ನಿನ್ನ ನೆನವೇ ಬದುಕಿನ ಸುಪ್ರಭಾತ

ಅನ್ನವನಿಟ್ಟು ನನ್ನಿಯ ನುಡಿಸಿದರು
ಅಕ್ಷರಗಳ ರಂಗೋಲಿ‌ ಬರೆಸಿದರು
ಆಶ್ರಯವಿಟ್ಟರು ಮಹಾ ಮಾತೆಯಾಗಿ
ತ್ರಿವಿಧ ದಾಸೋಹದ ಶ್ರೀಪತಿಯಾಗಿ

ಬಿಕ್ಷೆಯ ಬೇಡಿ ಸಲುಹಿದರು ಮಕ್ಕಳನು
ಬೆವರ ಸುರಸಿ ಕಟ್ಟಿದರು ಶ್ರೀಮಠವನು
ಸಮಾಜೋದ್ದಾರಕೆ ಸವೆಸಿ ಕಾಯವನು
ಕಾರ್ಯರೂಪಕ್ಕಿಳಿಸಿದರು ಕಾಯಕವನು

ನಡೆದಾಡುವ ದೇವರಾದರು ಭಕ್ತರಿಗೆ
ಭವರೋಗ ಕಳೆವ ವೈದ್ಯರು ಭವಿಗಳಿಗೆ
ಬಾಳಿದರು ಶತವರುಷ ಕ್ರಿಯಾಶೀಲರಾಗಿ
ಸಿದ್ದಗಂಗಾ ಮಠದ ಪ್ರಸಿದ್ಧಿ ಪುರುಷರಾಗಿ

ಸಿದ್ಧಿಪುರಷನ ಜನಮದಿನ‌ ಈ ಶುಭದಿನ‌
ಎಪ್ರಿಲ್ ಒಂದು ಈ ದಿನವಾಗಲಿ ಕಾಯಕದಿನ
ಸರ್ವರ ಮನಗಳಲ್ಲಿ ಶ್ರೀಗಳಿನ್ನೂ ಜೀವಂತ
ಶ್ರೀಗಳು ಅಮರ ಸೂರ್ಯನಿರುವ ಪರ್ಯಂತ


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ, (ಹೂವಿನ ಹಡಗಲಿ ತಾ.)

12:43