ಅನುದಿನ‌ ಕವನ-೧೫೫೩, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಮಗಳೆಂದರೆ ಹಾಗಲ್ಲವೆ…

ಮಗಳೆಂದರೆ ಹಾಗಲ್ಲವೆ…

ಇವಳ ಕಿರುನಗೆಯೊಳಗೆ
ಕವಿತೆ ಅಡಗಿದೆ
ಮಾತು ಹೂವಿನ ಹಾಗೆ
ಬೆಳಕನಿಯುವ ಪರಿಮಳ
ಸುತ್ತಲೂ ಹಾಗೆ ಇರುವುದು
ತಳಿರು ಚಿಗುರೊಡೆದು ಗಂಧವಿತ್ತಂತೆ…

ಬೀಸೋ ಗಾಳಿಯ ಜೋರು ಸದ್ದಿಗೆ
ತಣ್ಣನೆಯ ಹೊದಿಕೆ ಇವಳ ಕಿರುನಗೆ
ಎಡಬಲದಲ್ಲಿ ಅರಳೋ ಮೊಗ್ಗಿಗೆ-
ಸಾಕ್ಷಿಯಂತೆ ಚೈತ್ರೋದಯ ಕಣ್ಣ ಕಾಡಿಗೆ…

ತಂಗಾಳಿಯ ಸೆರಗು
ಗ್ರೀಷ್ಮ ಋತು ಚಳಿಗಾಳಿ ಮಳೆ ಬೆರಗು
ಮೂಡಣ ಸೂರ್ಯನ ಸೊಬಗು
ಕೆಂಪೆಸೆದು ನಿಂತ ಹಾಗೆ ಮಾತು ಸವಿ ಗುನುಗು…

ಮಗಳೆಂದರೆ ಹಾಗಲ್ಲವೆ
ನೋವ ಮರೆಸಿ ಗೆಲುವನಿತ್ತ ತಾಯಿ
ಸೋತರು ಮುನ್ನುಗುವ ಚಾಳಿ ಹೊತ್ತು
ಸದಾ ಮುನ್ನಡೆದ ಅಪ್ಪನಂತಲ್ಲವೆ…

-ಸಿದ್ದು ಜನ್ನೂರ್, ಚಾಮರಾಜನಗರ