ಬಿಸಿಲ ಝಳದ ಹನಿಗಳು
1. ಉದ್ದಾನುದ್ದ ರಸ್ತೆಯ ತುಂಬಾ
ಚಲ್ಲಾಡಿದ ಬಿಸಿಲಿನ ಝಳ
ಆ ತಿರುವಲ್ಲಿ ಸತಾಯಿಸುವ
ನಿನ್ನ ನೆನಪು
2. ಬಿಸಿಲಿಗೆ ತಂಪಾಗುವ ಹಂಗಿಲ್ಲ
ರಸ್ತೆ ತುಂಬಾ ಬೇಗೆಯ ಹಾವಳಿ
ಅಲ್ಲಲ್ಲಿ ಬಿರುಕುಬಿಟ್ಟ ಹಾದಿಗೆ
ನೆನಪುಗಳ ತೇಪೆ
3. ಬಿಸಿಲು ಹೆಚ್ಚಾಯಿತು !!!
ಕುದಿ ಮೈ ಶಾಖಕ್ಕೆ
ಆಲಿಂಗನದ ತೋಳುಗಳು
ಪಿಸುಮಾತಿನ ತಂಪು
4. ಇಳಿ ಬಿಸಿಲ ಸಂಜೆ
ಚೆಲ್ಲಿದ ನೆನಪಿನೋಕುಳಿ
ಏರುದಿನದ ವೈಭವ ನೆನಪು
ತಂಪಿಗೆ ಹಿತವಾಗಿ ಬೆವರು
5. ಬಿಸಿಲಿಗೆ ಅಸಾಧ್ಯ ಮೌನ
ತಂಪಿಗೆ ಮಾತಿನ ಹುಕಿ
ಕಣ್ಣ ಭಾಷೆಯ ಸಾನಿಧ್ಯಕ್ಕೆ
ಕಟ್ಟಿಕೊಂಡ ಅರ್ಥಗಳ ಸಾಧ್ಯತೆ
6. ಮಾತಿನೊಳಗಣ ಮೌನಕ್ಕೆ
ಮೌನದೊಳಗಿನ ಮಾತಿಗೆ
ಆವರಿಸಿದ ಅರ್ಥದಿಂಪು
ನಡುವ ಬಿಸಿಲಿನ ಝಳಕೆ
ಭಾವ ಸೊಗಡಿನ ಕಂಪು
7. ಸಾಗರದ ಮೇಲೆ ಹಾದುಹೋದ
ನೇರ ಬಿಸಿಲ ಕೋಲು
ಸಾಕ್ಷಿಯಾಯಿತು
ತನ್ನೊಳಗೆ ಹುದುಗಿಸಿಕೊಂಡು
ಸೇರಿದ ನೂರು ನದಿಯ ಸಾಲು
8. ಬಿಸಿಲಿಗೇಕೋ ಮುನಿಸು
ಝಳಕ್ಕೆ ತಂಪಿನ ಮೈಯೆಲ್ಲಾ
ಬೆವರು
ಬೇಗೆಯಾಳಕ್ಕಿಣುಕುವ ಕಾತರ
ಗುಟ್ಟು ಬಿಟ್ಟು ಕೊಡದ
ಶಾಖಕ್ಕೇನೊ ಸೊಕ್ಕು
9.ಬಿಸಿಲ ಕೋಲಿನ ಉದ್ದ
ಅಳೆಯಬೇಕೆಂದಿದ್ದೇನೆ
ತಂಪು ಮಾಪನಕ್ಕೆ ಅಸಮರ್ಥತೆ
ದುರ್ಬಲ ಗಳಿಗೆಗಳ ನಿರೀಕ್ಷೆಯಿದೆ
10.ಬಿಸಿಲ ಝಳಕೂ ಮತ್ತೇರಬೇಕು
ತಂಪು ತಾಣಕ್ಕೆ ಸೋಮಾರಿ ಸೆಳಕು
ಬಿಡುಬೀಸು ಓಲಾಟ ಸಂಕೋಚದ ಪಾಠ
ಚಿಟಿಕೆ ಸದ್ದಿಗೆ ನೀನು ಅಲ್ಲಲ್ಲೋ ಮೈ ಮುರಿಯಬೇಕು
ನವಿರಾಗಿ ಪುಳಕದಲಿ ನಾ ಮರೆಯಬೇಕು
11. ವಸಂತದಲ್ಲೇ ಬಿಸಿಲಿನ ಝಳ
ಬಿಸಿಲ ಹಿಂಬಾಲಿಸಿಯೇ ವಸಂತಾಗಮನ
ಬೆಳಕು ನೆರಳನ್ನು ಮುಚ್ಚಿದೆ
ಬೇಗೆ ಮನದ ತಾಪವ ತಟ್ಟಿದೆ
ತಣಿಸಬೇಕಾಗಿದೆ ಚಿಗುರು
ತಂಪಾಗಬೇಕಿದೆ ಇಳೆಯ ಬೆವರು
12. ತಂಪಿನ ಎದೆಕವಾಟದಲ್ಲಿ
ಬಿಸಿಲ
ಬೇಗೆ ತಣಿವ ಆಟದಲ್ಲಿ ಬೆಚ್ಚನೆ
ನಿಟ್ಟುಸಿರು
ಮುಸುಕಿನ ಮರೆಯಲ್ಲೆಲ್ಲೊ ಇಣುಕಿದ್ದಾನೆ ಚಂದ್ರ
ಬಯಲು ನೆಲವೆಲ್ಲಾ ಕುದಿವ ಎಸರು
13. ಬಿಸಿಲ ಮೂಲ ಸೂರ್ಯನಿಗೆ
ದಿಗಂತವನಾಳ್ವ ಅನುಮತಿ
ತಂಪು ತಣಿವ ಪೂರ್ಣ
ಚಂದ್ರನಿಗೋ
ಹಂಗಿನರಮನೆ ಸಮ್ಮತಿ
14. ಘೋರ ಬಿಸಿಲು ಗುಡಿಸಲ ಒಳ ಹೊಕ್ಕಿದೆ
ಅಂತಃಪುರಕ್ಕೇನೂ ಹಾನಿಯಿಲ್ಲ
ಎಳೆ ಕೂಸಿಗೆ ಹಾಲಿನ ಕೊರತೆ
ಮಹಲಿಗೇನೂ ಬರವಿಲ್ಲ
15. ಅರೆ ಬಿರಿದ ಪಾದಗಳಿಗೆ
ಕಾದ ನೆಲದ ಬರೆ
ಕೆಂಪು ಕಾರ್ಪೆಟ್ಟಿನ ಕಾಲುಗಳು
ಬಿಡುಬೀಸಾಗಿ ಸಾಗಿವೆ
ಬಿಸಿಲು ತೀರಾ ಕ್ರೂರಿ
16. ಒಣತುಟಿಯ ಕಂದಮ್ಮನಿಗೆ
ಬೊಗಸೆ ನೀರಿನ ಕನಸು
ಹಸಿದ ಹೊಟ್ಟೆ ತೊಡಬೇಕಿದೆ
ಜೀವ ಜಲಾಮೃತದ ದಿರಿಸು
ಬಿಸಿಲ ಝಳ ಕರಗಿಸಿದೆ
ಅಂತಃಕರಣದ ಅಂತರ್ಜಲ
ಮರೀಚಿಕೆಯಾದೀತು
-ಮಮತಾ ಅರಸೀಕೆರೆ
—–