ಅನುದಿನ ಕವನ-೧೫೫೫, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ:ಕೊನೆಯ ಕಂಬನಿಯ ಮುಗುಳ್ನಗೆ!

ಕೊನೆಯ ಕಂಬನಿಯ ಮುಗುಳ್ನಗೆ!

ಮುರಿದು ಬಿದ್ದ ರೆಕ್ಕೆಯ
ಹಕ್ಕಿಯ ವಿಲವಿಲ ಸದ್ದು
ಕೇಳುತ್ತಿಲ್ಲ ಏಕೋ
ಕಿವುಡಾಗಿದೆ ಆಗಸ
ಕುರುಡಾಗಿದೆ ಭೂಮಿ
ಕೊರಳಲ್ಲಿ ಸಿಕ್ಕಿ
ಕರ್ಕಶವಾಗಿದೆ ಕೂಹೂ
ಯಾರಿಗೂ ಬೇಡದ ನೋವು
ಬಿಕ್ಕಿ ಬಿಕ್ಕಿ

ದೂರ ಸರಿವ
ನೆರಳುಗಳ ನಡುವೆ
ಜೋತುಬಿದ್ದ ಪಂಜರವೊಂದು
ಕಣ್ಣಲಿ ಬೇರುಬಿಟ್ಟಿದೆ
ಅನಾಮಿಕ ಕೈಯಲ್ಲಿನ ಚೂರಿ
ಹಿಡಿ ಬಿಡಿಸಿ
ಗುರಿ ಹುಡುಕುತ್ತಿದೆ
ಹಸಿವ ಕೆಂಪಾಗಿಸಿ
ಸುಮ್ಮನೆ ಅಲೆಯುತ್ತಿದೆ

ಸಾವಿಗೆ ಅಂಜದ ಜನುಮ
ಈಗ ಥರಗುಟ್ಟುವ
ಸಮಯದ ಬಂಧಿ
ಕಾಲ, ವಿಧಿಯ
ಹಗಲು ವೇಷ ತೊಟ್ಟು
ವಂಚಿಸುವ ಸರದಿ
ಕೊನೆಯ ಕಂಬನಿಯ
ಮುಗುಳ್ನಗೆಯೊಂದು
ಶರ ಬರೆಯುತ್ತಿದೆ ಇಲ್ಲಿ


◼️ಜಬೀವುಲ್ಲಾ ಎಮ್. ಅಸದ್, ಬೆಂಗಳೂರು