ಹೇಳಬೇಕಿದೆ ನಿನಗೆ ಮಗಳೇ…..
ಬದುಕಿನಲ್ಲಿ ಎಲ್ಲರನ್ನೂ ಮೆಚ್ಚಿಸಲು
ಅಸಾಧಾರಣ, ಅದ್ಭುತವೆನಿಸಿಕೊಳ್ಳಲು
ದಿನವೂ ತೇಯಬೇಕಾಗಿಲ್ಲ , ನೆನಪಿರಲಿ
ನಿನ್ನೊಳಗೆ ,ನೀನೇ ಇರುವುದಿಲ್ಲ ಆಗ ಅಲ್ಲಿ
ಹತ್ತು ಜನರಲ್ಲಿ ಹನ್ನೊಂದನೆಯವಳಾಗಿ
ಸಾಮಾನ್ಯವಾದ ಬದುಕೊಂದ ಅಪ್ಪಿಬಿಡು
ಬದುಕಿನೋಟದ ಸ್ಪರ್ಧೆಯ ಗೋಜೇ ಬೇಡ
ಗೆದ್ದವರಿಗೊಂದು ಚಪ್ಪಾಳೆಯ ತಟ್ಟಿಬಿಡು
ಸಿಹಿ ಚಪ್ಪರಿಸಿ ಕಣ್ಣರಳಿಸುವ ಬೆರಗು
ಅಪರಿಚಿತರ ನೋವಿಗೊಂದು ಮರುಗು
ಸಂತೆಬೀದಿಯ ಪರಿಚಿತರಿಗೊಂದು ನಗು
ಆಗಾಗ ಒಂದು ಅಪ್ಪುಗೆಯಿರಲಿ ನನಗೂ
ಓದು, ಸಂಗೀತ ,ಕಲೆ ಆಟೋಟಗಳಿರಲಿ
ನಿನ್ನಿಚ್ಛೆಗನುಸಾರವಾಗಿ ಆರಿಸಿಕೋ ಎಲ್ಲ
ನಿನ್ನ ಮುಖದ ಹೂನಗು, ಹುಡುಗಾಟವೆಲ್ಲ
ಕಳೆದುಹೋಗದಿರಲಿ ಅತೀ ನಿರೀಕ್ಷೆಗಳಲಿ
ಅದೆಷ್ಟೇ ಬೆಳೆದರೂ ಆ ಪುಟ್ಟ ನಿಷ್ಕಲ್ಮಶ
ಪೋರಿಯ ಮನಸ್ಸು ಜೀವಂತವಾಗಿರಲಿ
ಸಾಧಾರಣದಲ್ಲಿರುವ ಅಸಾಧಾರಣ ಚೆಲುವು
ನಿನ್ನಗರಿವಾದರೆ ಸಾಕು ,ಅದೇ ಬದುಕಿನ ಗೆಲುವು..
-ರೂಪ ಗುರುರಾಜ, ಬೆಂಗಳೂರು
—–