ಬಳ್ಳಾರಿ, ಏ.5: ಶೋಷಿತ ವರ್ಗಗಳ ಜತೆಗೆ ಎಲ್ಲಾ ವರ್ಗದ ಹಿತವನ್ನು ಬಯಸಿದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು ಎಂದು ವಿಎಸ್ ಕೆ ವಿವಿ ಸಹಾಯಕ ಪ್ರಾಧ್ಯಾಪಕ
ಡಾ. ರಾಜೇಂದ್ರ ಪ್ರಸಾದ್ ಹೇಳಿದರು.
ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜು ಶನಿವಾರ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ, ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ 118 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.
ಜಾತಿರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಡಾ. ಬಾಬುಜೀ ಅವರು, ಕೃಷಿ,ರೈಲ್ವೆ, ರಕ್ಷಣಾ, ಕಾರ್ಮಿಕ ಖಾತೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ದಕ್ಷ ಆಡಳಿತ ನೀಡಿದರು.
ಮಹಾಪುರುಷರನ್ನು ಒಂದೇ ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಡಾ. ಅಂಬೇಡ್ಕರ್ ಮತ್ತು ಡಾ.ಜಗಜೀವನ ರಾಮ್ ಅವರು ತಳ, ಶೋಷಿತ ಸಮುದಾಯಗಳ ಎರಡು ಕಣ್ಣುಗಳು ಎಂದು ಅಭಿಪ್ರಾಯಪಟ್ಟರು.
ಸರಕಾರಿ ಯೋಜನೆಗಳ ನಿರೂಪಣೆಯಲ್ಲಿ ಡಾ. ಬಾಬುಜೀ ಅವರ ವಿಚಾರಗಳನ್ನು ಅಳವಡಿಸಿ ಕೊಳ್ಳಬೇಕು ಎಂದು
ತಿಳಿಸಿದರು.
ಡಾ. ಬಾಬುಜೀ ಅವರಿಗೆ ಅರ್ಹತೆ ಇದ್ದರೂ ಜಾತಿ ಕಾರಣಕ್ಕೆ ಪ್ರಧಾನಿ ಹುದ್ದೆ ತಪ್ಪಿದ ಬಗ್ಗೆ ಡಾ. ರಾಜೇಂದ್ರ ಪ್ರಸಾದ್ ಮಾರ್ಮಿಕವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರುಗಪ್ಪ ಮಾತನಾಡಿ, ನವಭಾರತ ನಿರ್ಮಾಣದಲ್ಲಿ ಡಾ. ಅಂಬೇಡ್ಕರ್ ಮತ್ತು ಡಾ. ಬಾಬುಜೀ ಪಾತ್ರ ಅನನ್ಯ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ ಅವರು ಮಾತನಾಡಿ, ಡಾ. ಬಾಬು ಜಗಜೀವನ ರಾಮ್, ಡಾ. ಬಿ ಆರ್ ಅಂಬೇಡ್ಕರ್ ಅವರು ಬರೀ ವ್ಯಕ್ತಿಗಳಾಗಿರಲಿಲ್ಲ ದೇಶದ ಶಕ್ತಿ ಗಳಾಗಿದ್ದರು. ಡಾ. ಬಾಬುಜೀ ಆಧುನಿಕತೆ ಬಳಸಿಕೊಂಡು ಕೃಷಿಯಲ್ಲಿ ಕ್ರಾಂತಿ ತಂದವರು ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಹ್ದಾದ ಚೌಧರಿ ಅವರು ಮಾತನಾಡಿ, ಮಾಜಿ ಉಪ ಪ್ರಧಾನಿ ಡಾ. ಜಗಜೀವನ ರಾಮ್ ಅವರು ಬಿಹಾರದಂತ ಹಿಂದುಳಿದ ಪ್ರದೇಶದಲ್ಲಿ ಜನಿಸಿ ಅಸ್ಪೃಶ್ಯತೆಯನ್ನು ಮೆಟ್ಟಿನಿಂತು ಮಹಾನ್ ಸಾಧಕರಾದರು ಎಂದು ಬಣ್ಣಿಸಿದರು.
ಡಾ. ಬಾಬುಜೀ ಅವರ ಬದುಕು, ಹೋರಾಟ ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ
ಡಾ. ಬಾಬುಜೀ ಅವರ ಆದರ್ಶ ಬದುಕು ವಿದ್ಯಾರ್ಥಿಗಳಿಗೆ ಪರಿಚಯಿಸಲು
ಕಾಲೇಜಿನ ಪಠ್ಯದಲ್ಲಿ ಇವರ ಜೀವನ ಚರಿತ್ರೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ವೇದಿಕೆಯಲ್ಲಿ ಆಂಗ್ಲವಿಭಾಗದ ಮುಖ್ಯಸ್ಥೆ ಪ್ರೊ. ಮೊನಿಕಾ ರಂಜನಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಹ, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕಾಲೇಜು ವತಿಯಿಂದ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಪ್ರಾಚಾರ್ಯರು ಸನ್ಮಾನಿಸಿ ಗೌರವಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥರೂ ಆದ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ಸಿ. ಎಚ್. ಸೋಮನಾಥ ಸ್ವಾಗತಿಸಿದರು.
ವಿದ್ಯಾರ್ಥಿನಿ ಪವಿತ್ರ ಪ್ರಾರ್ಥಿಸಿದರು.
ಇತಿಹಾಸ ಉಪನ್ಯಾಸಕ ಹರೀಶ್ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಕೆ. ಬಸಪ್ಪ ವಂದಿಸಿದರು.
—–