ಅನುದಿನ ಕವನ-೧೫೫೭, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ!

ನಾನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ!
(ಒಂದು ಗದ್ಯದಂತಹ ಪದ್ಯ!)

`ನಿಮ್ಮ ಕಾಲದಲ್ಲಿ ಇಷ್ಟು ಜಂಜಾಟವಿರಲಿಲ್ಲ ‘
ಯುವಕರು, ಮಕ್ಕಳು ಹೇಳುತ್ತಲೇ ಇರುತ್ತಾರೆ.
`ನನ್ನ ಕಾಲವೆಂದರೇನು?’ ಯೋಚಿಸುತ್ತೇನೆ
ಬದುಕಿರುವಷ್ಟು ದಿನ ನನ್ನದೇ ಕಾಲವಲ್ಲವೇ?
ಯೌವನವಷ್ಟೇ ಕಾಲವೇ? ವೃದ್ಧಾಪ್ಯವಲ್ಲವೇ?
ಜಂಜಡಗಳ ಸ್ವರೂಪ ಬದಲಾಗಿದೆ, ನಿಜ
ಹೋರಾಟವಿರದ ಬದುಕು ಎಂದಾದರೂ ಇತ್ತೇ?

ನಿಮ್ಮ ಕಾಲದಲ್ಲಿ ಹೀಗೆ, ಇಷ್ಟು ಜಂಜಾಟವಿರಲಿಲ್ಲ
ಯುವಕರು, ಮಕ್ಕಳು ಹೇಳುತ್ತಲೇ ಇರುತ್ತಾರೆ.
ನಾನು ಈಗೀಗ ಸುಮ್ಮನೆ ನಕ್ಕು ಬಿಡುತ್ತೇನೆ
ನಿಮ್ಮ ಕಾಲದಲ್ಲಿ ನಾನಿನ್ನೂ ಬದುಕಿದ್ದೇನೆ
ಹಾಗೆ ನೋಡಿದರೆ ಹೆಚ್ಚು ಸುಖವಾಗಿದ್ದೇನೆ
ಬೇಡವೆನಿಸಿದ್ದನ್ನು ನಿಮ್ಮಂತೆ ಕಿತ್ತೊಗೆಯಬಲ್ಲೆ
ಹೇಳಲು ಗಟ್ಟಿ ದನಿಯಿದೆ ಇಲ್ಲವಾದರೆ ಸುಮ್ಮನೆ
ನನ್ನೊಳಗೆ ನಾನು ಕಳೆದುಹೋಗಬಹುದಾಗಿದೆ

`ನಿಮ್ಮ ಕಾಲದಲ್ಲಿ ಇಷ್ಟು ಜಂಜಾಟವಿರಲಿಲ್ಲ’
ನಿಮ್ಮ ಮಕ್ಕಳು ಈ ಮಾತು ಹೇಳುವುದನ್ನು
ಕೇಳುತ್ತೇನೋ ಇಲ್ಲವೋ ನನಗಂತೂ ತಿಳಿಯದು
ಸದ್ಯ,ನಾನಿನ್ನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ!


-ಎಂ ಆರ್ ಕಮಲ, ಬೆಂಗಳೂರು
—–