ಅನುದಿನ ಕವನ-೧೫೫೮, ಕವಯಿತ್ರಿ: ಡಾ.‌ಭಾರತಿ ಅಶೋಕ್, ಹೊಸಪೇಟೆ

ಬರಗೆಟ್ಟ ಭರವಸೆಗಳು
ನೆಲಕ್ಕೊರಗಿ ಆಲಾಪಿಸುತ್ತಿರುವಾಗ
ಅಲ್ಲೊಮ್ಮೆ
ಮಳೆ ಸುರಿದು ತಂಪಾದ
ವಾರ್ತೆಗೆ ಕಿವಿಯಾನಿಸಿ
ಇಲ್ಲೂ ಅಂತಹದ್ದೆ ತಂಪಿಗೆ ಹಪಾಹಪಿಸಿ ಸೋತಾಗ…

ಇನ್ನೆಲ್ಲೋ ಮತ್ತದೆ ತಂಪಿನ
ಸುವಾರ್ತೆ ಆಸೆಯ ಪಸೆ ಒಸರಿಸುತ್ತದೆ.

ಪಸೆಯೂ ಇಲ್ಲವಾಗಿ ಒರಟು
ದೇಹ ಒರಟೊರಟಾದ ನೆಲಕ್ಕೊರಗಿ ಬೆನ್ನ ನವೆ ತೀರಿಸಿಕೊಳ್ಳುತ್ತಿರುವಾಗಲೇ
ಬಾನು ಭೂಮಿ ಒಂದಾಗಿಸಿ
ಸೂರೆಲ್ಲಾ ನೀರೇ ನೀರಾಗಿ
ನಾವಿಬ್ಬರೂ ಆ ದಡ ಈ ದಡ

ಈಗ ಬರಗೆಟ್ಟಿದ್ದ ಭರವಸೆಗಳೆಲ್ಲಾ ಮೈ ಬಗ್ಗಿಸಿ
ನೀರಿಂದ ಸೂರ ಬಿಡಿಸಿಕೊಳ್ಳುವ ಭರಾಟೆಯಲ್ಲಿವೆ


-ಡಾ. ಭಾರತಿ ಅಶೋಕ್, ಹೊಸಪೇಟೆ