ಬಳ್ಳಾರಿ, ಏ.7: ಬಳ್ಳಾರಿ ಗ್ರಾಮೀಣ ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಒತ್ತಾಯಿಸಿದರು.
ಸೋಮವಾರ ”ಸಲಾಂ ಬಳ್ಳಾರಿ ಅಭಿಯಾನ’ದ ಅಂಗವಾಗಿ ವಾರ್ಡ್ ಸಂಖ್ಯೆ 10ರ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದರು.
ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಕೂಡ ನಾಗೇಂದ್ರ ಅವರು ಮಂತ್ರಿಯಾಗಬೇಕೆಂದು ಮನವಿ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ನಾಗೇಂದ್ರ ಅವರು ಮಂತ್ರಿಯಾಗಲೇಬೇಕು ಎಂದು ಒತ್ತಾಯಿಸಿದರು.
ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮತ್ತು ನಾಗೇಂದ್ರ ಅವರು ಕಾಣೆಯಾಗಿದ್ದಾರೆ ಎಂಬ ವಿಪಕ್ಷದವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ವೈಯಕ್ತಿಕ ಕಾರಣಗಳ ಹಿನ್ನೆಲೆ ನಾಗೇಂದ್ರ ಅವರು ಕ್ಷೇತ್ರಕ್ಕೆ ಬರುತ್ತಿಲ್ಲ. ಶೀಘ್ರದಲ್ಲೇ ಬರುತ್ತಾರೆ, ಸಚಿವ ಜಮೀರ್ ಅಹ್ಮದ್ ಅವರು ಕೂಡ ಶೀಘ್ರದಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಾರೆ ಎಂದರು.
ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬೃಹತ್ ಟವರ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಅದು ನಾಗೇಂದ್ರ ಅವರ ಕೈಯಲ್ಲಿಯೇ ಉದ್ಘಾಟನೆಯಾಗಲಿದೆ ಎಂದ ಶಾಸಕ ರೆಡ್ಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕ ನಾಗೇಂದ್ರ, ಸಚಿವ ಜಮೀರ್ ಅಹ್ಮದ್ ಎಲ್ಲರ ನೇತೃತ್ವದಲ್ಲಿ ಟವರ್ ಉದ್ಘಾಟನೆ ಆಗಲಿದೆ ಎಂದರು.
ಉಸ್ತುವಾರಿ ಸಚಿವರು ಜಿಲ್ಲೆಗೆ ಬರುತ್ತಿಲ್ಲ ಎಂದ ಮಾತ್ರಕ್ಕೆ ಯಾವುದೇ ಅಭಿವೃದ್ಧಿ ಕುಂಠಿತವಾಗಿದೆ ಎಂದರ್ಥವಲ್ಲ, ಎಲ್ಲೂ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದರು.
ಬಳ್ಳಾರಿ ಜಿಲ್ಲೆಗೆ ಉತ್ತಮ ಅನುದಾನ ಬರುತ್ತಿದೆ, ನಿರಂತರವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.
ಸಲಾಂ ಬಳ್ಳಾರಿ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಈಗಾಗಲೇ ಭೇಟಿ ನೀಡಲಾಗಿರುವ ವಾರ್ಡ್ ಸಂಖ್ಯೆ 6 ಮತ್ತು 13ರಲ್ಲಿನ ಸಮಸ್ಯೆಗಳನ್ನು ಆಧರಿಸಿ ಅಂದಾಜು 3 ಕೋಟಿ 50 ಲಕ್ಷ ರೂ.ಗಳ ಅನುದಾನದಡಿ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧ ಆಗಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ತೆಂಗಿನಕಾಯಿ ರಾಜಣ್ಣ, ತೆಂಗಿನಕಾಯಿ ಬಸವರಾಜ, ಮಡಿವಾಳಪ್ಪ, ತಿಮ್ಮಪ್ಪ, ಪೃಥ್ವಿರಾಜ, ಹರೀಶ್, ಎಂ.ಡಿ.ತೌಸಿಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾಂ, ವೆಂಕಟೇಶ ಹೆಗಡೆ, ರಾಕೇಶ್ ವರ್ಮಾ, ಚಾನಾಳ್ ಶೇಖರ್, ರಸೂಲ್, ರಾಮು, ರಜಾಕ್ ಮೊದಲಾದವರು ಇದ್ದರು.
—–