ಬಳ್ಳಾರಿ, ಏ.8: ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯನ್ನಾಗಿ ರೂಪಿಸುವುದೇ ಶಿಕ್ಷಕರ ಗುರಿಯಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ಡಾ. ಶೋಭಾ ರಾಣಿ ವಿ ಜೆ ಅವರು ಅಭಿಪ್ರಾಯ ಪಟ್ಟರು.
ಅವರು ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಆಗಮನ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಕ್ಷಕ ವೃತ್ತಿ ಎನ್ನುವುದು ಜಾಗತಿಕ ವೃತ್ತಿ, ಸುಸಂಸ್ಕೃತ ಸಮಾಜವನ್ನು ನಿರ್ಮಿಸುವ ಶಕ್ತಿ ಶಿಕ್ಷಕರದು ಎಂದು ಶಿಕ್ಷಕರ ಮಹತ್ವವನ್ನು ತಿಳಿಸಿದರು. ಮನಸಿದ್ದರೆ ಮಾರ್ಗವೆಂಬಂತೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಎಎಸ್ ಐಪಿಎಸ್ ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸುವಂತಹ ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಪ್ರೇರಣೆ ನುಡಿಗಳನ್ನಾಡಿದರು. ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರವು, ಯೋಜನೆಯು ಸ್ಪಷ್ಟವಾಗಿರಬೇಕು ಮತ್ತು ಸಮಯ ಪ್ರಜ್ಞೆ ಅರಿತುಕೊಂಡಿರಬೇಕು ಎಂದರು.
ಸಮಾಜವನ್ನು ಕೇವಲ ಒಬ್ಬರಿಂದ ತಿದ್ದಲು ಸಾಧ್ಯವಿಲ್ಲ, ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನಾರಿತು ನಿಭಾಯಿಸಬೇಕು ಎಂದು ಹೇಳಿದರು. ಸಂವಿಧಾನ ಮತ್ತು ಕಾನೂನನ್ನ ಗೌರವಿಸಬೇಕು. ಸಂವಿಧಾನ ಮೂಲಕವೇ ನಾವು ನಮ್ಮ ಹಕ್ಕುಗಳನ್ನ ಮತ್ತು ಬದುಕನ್ನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಅಶ್ವ ರಾಮು ಅವರು ಈ ಸಮಾರಂಭವು ಹಿರಿಯರು ಮತ್ತು ಕಿರಿಯರು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಬೆಸೆಯುವ ಸಮಾರಂಭವಾಗಿದೆ, ಹೊಸ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿಸಲು ಧನಾತ್ಮಕವಾದಂತ ಮತ್ತು ಉತ್ತಮವಾದ ಭಾವನೆಯನ್ನು ಮೂಡಿಸಲು ಡಾ ಶೋಭಾ ರಾಣಿ ಯಂತಹ ಐಪಿಎಸ್ ಅಧಿಕಾರಿಗಳನ್ನು ಆಹ್ವಾನಿಸಿ ಅವರಿಂದ ಸ್ಪೂರ್ತಿದಾಯಕವಾದ ಚಿಂತನೆಗಳನ್ನ ತಿಳಿದುಕೊಳ್ಳುವಂತಹ ಆಗಮನ ಎಂಬ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಸತ್ಯಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ್ ಕುಮಾರ್ ಮಾತನಾಡಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರವಿದೆ. ಇಂಥ ಶಿಕ್ಷಕ ವೃತ್ತಿಗೆ ಆಯ್ಕೆ ಮಾಡಿಕೊಂಡಿರುವುದು ಅಭಿನಂದನೆಗಳು ಎಂದು ಹೇಳಿದರು.
ಸಂವಾದ: ಪ್ರಾಂಶುಪಾಲ ಡಾ ಅಶ್ವ ರಾಮು ಮತ್ತು ಉಪನ್ಯಾಸಕ ಆಲಂಭಾಷ ಅವರು ಎಸ್ಪಿ ಡಾ. ಶೋಭಾ ರಾಣಿ ಅವರೊಂದಿಗೆ ಸಂವಾದಿಸಿದರು. ಸನ್ಮಾನ: ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಡಾ ಶೋಭಾ ರಾಣಿ ವಿ ಜೆ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸತ್ಯಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಆಲಂಭಾಷ ಅವರು ಸ್ವಾಗತಿಸಿ ನಿರೂಪಿಸಿದರು. ಕಾಂತಮುನಿ ವಂದಿಸಿದರು. ನಂತರ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.