ಬಳ್ಳಾರಿ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಶ್ರೀ ಲಕ್ಷ್ಮಿಕಲಾ ಟ್ರಸ್ಟ್ ಕೊಡುಗೆ ಅನನ್ಯ -ಡಾ. ರಮೇಶ ಗೋಪಾಲ

ಬಳ್ಳಾರಿ, ಏ.8: ಜಿಲ್ಲೆಯ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ನಗರದ ಶ್ರೀ ಲಕ್ಷ್ಮಿ ಕಲಾ ಟ್ರಸ್ಟ್ ಕೊಡುಗೆ ಅನನ್ಯ ಎಂದು ಉದ್ಯಮಿ, ಕಲಾ ಪೋಷಕ ಡಾ. ರಮೇಶ ಗೋಪಾಲ‌ ಅವರು ಶ್ಲಾಘಿಸಿದರು.
ನಗರದ ಶ್ರೀ ಜೋಳದರಾಶಿ‌ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ಶ್ರೀ ಲಕ್ಷ್ಮಿ ಕಲಾ ಟ್ರಸ್ಟ್‌ನ 36ನೇ ವಾರ್ಷಿಕೋತ್ಸವ ಹಾಗೂ ಶ್ರೀ ರಾಮ ನೃತ್ಯೋತ್ಸವ-2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್ ಕೆ ಆರ್ ಜಿಲಾನಿ ಭಾಷ ಅವರು ನಾಲ್ಕು ದಶಕಗಳಿಂದ ನಗರದಲ್ಲಿ ಉತ್ತಮ ಸಾಂಸ್ಕೃತಿಕ ಪರಿಸರಕ್ಕೆ ಶ್ರಮಿಸುತ್ತಿದ್ದಾರೆ. ನಗರದ ಇವರ ನೂರಾರು ಶಿಷ್ಯರು ವಿದೇಶಗಳಲ್ಲಿದ್ದು ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದಾರೆ ಎಂದು ಹೇಳಿದರು.
ಎರಡೂವರೆ ಮೂರು ವರ್ಷದ ಮಕ್ಕಳು ಇಂದು ಗೆಜ್ಜೆಪೂಜೆಯಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶನ‌ ನೀಡಿದ್ದು ಜಿಲಾನಿ‌ ಭಾಷಾ ಅವರ ಪ್ರತಿಭೆ, ಪರಿಶ್ರಮವನ್ನು ಪರಿಚಯಿಸುತ್ತದೆ ಎಂದು ಕೊಂಡಾಡಿದರು.


ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಮಾತನಾಡಿ, ಆಂದ್ರದ ಕಡಪ‌ದಲ್ಲಿ‌ ಜನಿಸಿದ ಜಿಲಾನಿ ಭಾಷ ಅವರು ಬಳ್ಳಾರಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಸಾವಿರಾರು ಮಕ್ಕಳಿಗೆ, ಕಿರಿಯರಿಗೆ, ಹಿರಿಯರಿಗೆ ಭರತನಾಟ್ಯ, ಕೂಚಿಪುಡಿ, ಜಾನಪದ ನೃತ್ಯವನ್ನು ಕಲಿಸಿ ಇವರ ಜೀವನ ಮಟ್ಟವನ್ನು ಸುಧಾರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ-ತೆಲುಗು ಸಾಮರಸ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿರುವ ಜಿಲಾನಿ ಭಾಷಾ ಅವರಿಗೆ ಕೇಂದ್ರ ಸರಕಾರದ ಪ್ರಶಸ್ತಿ ಪುರಸ್ಕಾರಗಳು ದೊರೆಯಬೇಕಿದೆ ಎಂದು ತಿಳಿಸಿದರು.
ಎರಡೂವರೆ ದಶಕಗಳಿಂದ ಪತ್ರಕರ್ತನಾಗಿ, ಸಾಂಸ್ಕೃತಿಕ ಸಂಘಟಕನಾಗಿ ಇವರ ಒಡನಾಟದಲ್ಲಿದ್ದು ಹತ್ತಿರದಿಂದ ಇವರ ಪರಿಶ್ರಮ, ಪ್ರತಿಭೆಯನ್ನು ಕಂಡಿದ್ದೇನೆ ಎಂದು ಹೇಳಿದರು.


ನಿವೃತ್ತ ಮುಖ್ಯ ಗುರು ಜಿ. ಆರ್. ವೆಂಕಟೇಶ್ವರಲು ಮಾತನಾಡಿ, ಲಲಿತ ಕಲೆಗಳ ಬೆಳವಣಿಗೆಗೆ ಜಿಲಾನಿ‌ಭಾಷಾ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರತಿಭಾವಂತ ನೃತ್ಯ ಗುರುಗಳಾಗಿರುವ ಇವರಿಗೆ ಸರಕಾರ, ಸಂಘ ಸಂಸ್ಥೆಗಳು ಉತ್ತೇಜನ ನೀಡಬೇಕಿದೆ ಎಂದರು.
ನೃತ್ಯಗುರು ಜಿಲಾನಿ‌ ಭಾಷಾ ಅವರು ಮಾತನಾಡಿ, ನಲವತ್ತು ವರ್ಷಗಳ‌ ಹಿಂದೆ ಬಳ್ಳಾರಿಗೆ ಬಂದ ದಿನದಿಂದ ಈವರೆಗೂ ತಮಗೆ ಆಶ್ರಯ ನೀಡಿ, ಪ್ರೋತ್ಸಾಹಿಸಿದ ಹತ್ತಾರು ಕಲಾಪೋಷಕರನ್ನು‌ ಕೃತಜ್ಞತೆಯಿಂದ‌‌ ನೆನೆದರು.
ನನ್ನ ಕೊನೆಯುಸಿರು ಇರುವ ತನಕ ಸಂಗೀತ ನೃತ್ಯ ಕ್ಷೇತ್ರದ ಪ್ರಗತಿಗೆ ದುಡಿಯುವೆ ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ದೇವಪ್ರಕಾಶ ರೆಡ್ಡಿ, ರಾಜ್ಯಲಕ್ಷ್ಮಿ ಪ್ರತಾಪ ರೆಡ್ಡಿ, ಚಿತ್ರಕಲಾವಿದ ಮಹಮ್ಮದ್ ರಫಿ ಮತ್ತಿತರರು ಉಪಸ್ಥಿತರಿದ್ದರು.


ಕಲಾ ಕ್ಷೇತ್ರದ ವಿದ್ಯಾರ್ಥಿಗಳ ಭರತನಾಟ್ಯ, ಕೂಚಿಪುಡಿ, ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಶ್ರೀನಿವಾಸ ಕಲ್ಯಾಣ ಹಾಗೂ ಲಂಬಾಣಿ ನೃತ್ಯ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದವು.
ಸನ್ಮಾನ: ಡಾ. ರಮೇಶ ಗೋಪಾಲ, ಸಿ.ಮಂಜುನಾಥ, ಮಹಮ್ಮದ್ ರಫಿ ಮತ್ತಿತರ ಗಣ್ಯರನ್ನು ಜಿಲಾನಿ ಭಾಷಾ ಅವರು ಸನ್ಮಾನಿಸಿ ಗೌರವಿಸಿದರು.
ಅಧ್ಯಾಪಕ ಎ. ಶಿವಕುಮಾರ್ ಸ್ವಾಗತಿಸಿ ನಿರೂಪಿಸಿದರು. ರಹೇನಾ ವಂದಿಸಿದರು.


—–