ಬಳ್ಳಾರಿ, ಏ, 11: ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಬಾರಿ ಪ್ರಾಂಶುಪಾಲರಾದ
ಪ್ರೊ.ಮೋನಿಕಾ ರಂಜನ್ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ ಜಾನಪದ ಉತ್ಸವ 2025 ‘ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ವೈವಿಧ್ಯಮಯವಾದ ಜನಪದ ಕಲೆಗಳಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ
ಎಲ್ಲರದಾಗಬೇಕೆಂದರು.
ಜಾನಪದ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನ ದರ್ಶನವಾಗಿದೆ. ಅವರ ನೋವು, ನಲಿವು,ಜೀವನ ವಿಧಾನ,ಸಂಸ್ಕೃತಿ ಎಲ್ಲವೂ ಅದರಲ್ಲಿ ಮಿಳಿತವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಆಧುನಿಕ ಜಗತ್ತಿನ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆಗಳು ಇಂದು ನಶಿಸುತ್ತಿವೆ.ಯುವ ಮನಸ್ಸುಗಳಲ್ಲಿ ಜಾನಪದ ಸಾಹಿತ್ಯದ ಬಗೆಗೆ ಅರಿವನ್ನು, ಕಲೆಗಳ ಬಗೆಗೆ ಪ್ರೀತಿಯನ್ನು ಹುಟ್ಟಿಸುವುದು. ಮುಂದಿನ ತಲೆಮಾರಿಗಾಗಿ ಇದನ್ನು ದಾಟಿಸುವುದ ಈ ಕಾರ್ಯಕ್ರಮದ ಮೂಲ ಉದ್ದೇವಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ, ಜಾನಪದ ಸಾಹಿತ್ಯವು ಮಾನವೀಯ ಮೌಲ್ಯ, ನೀತಿ, ಆದರ್ಶ ಮುಂತಾದ ಗುಣಗಳನ್ನು ಕಟ್ಟಿಕೊಡುತ್ತದೆ. ಬಹಳ ಮುಖ್ಯವಾಗಿ ಜಾನಪದ ಆಟಗಳಿಂದ ಜನರಿಗೆ ಸಂತೋಷವಾಗುವುದರೊಂದಿಗೆ ದೈಹಿಕ ಶ್ರಮ ಕೂಡ ಆಗುತ್ತಿತ್ತು ಎಂದರು.
ವೇದಿಕೆ ಮೇಲೆ ಹಿರಿಯ ಸಹ ಪ್ರಾಧ್ಯಾಪಕ, ಜಾನಪದ ಉತ್ಸವ ಸಮಿತಿಯ ಸಂಚಾಲಕರಾದ ಡಾ. ಸಿ. ಎಚ್. ಸೋಮನಾಥ್, ಅಧ್ಯಾಪಕರಾದ ಡಾ. ಮಂಜುನಾಥ್, ಜಯಶ್ರೀ,
ಡಾ.ಪಂಚಾಕ್ಷರಿ, ಪಂಪನಗೌಡ, ಡಾ. ಗುರುಬಸಪ್ಪ, ಗ್ರಂಥಪಾಲಕ ಪ್ರಶಾಂತ, ಡಾ. ಟಿ. ದುರುಗಪ್ಪ, ಡಾ. ಕನ್ಯಾಕುಮಾರಿ,
ಡಾ. ಪಲ್ಲವಿ, ಅಧೀಕ್ಷಕ ಯುವರಾಜ ನಾಯ್ಕ ಇದ್ದರು.
ಮೆರವಣಿಗೆ: ಜಾನಪದ ಮೆರವಣಿಗೆ ಕಾಲೇಜಿನಿಂದ ಆರಂಭವಾಗಿ ಸಂಗಮ್ ಚೌಕಿನವರೆಗೆ ನಡೆಯಿತು.
ಕಾಲೇಜಿನ ವಿದ್ಯಾರ್ಥಿಗಳ ವೀರಗಾಸೆ, ಲಂಬಾಣಿ ನೃತ್ಯ,ಡೊಳ್ಳು ಕುಣಿತ,ಕಂಸಾಳೆ, ಕೋಲಾಟ, ಬಯಲಾಟ, ಮಣಿಪುರಿ ನೃತ್ಯ, ಯಕ್ಷಗಾನ ಕಲಾತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ನಂತರ ವೇದಿಕೆಯಲ್ಲಿ ವೈವಿಧ್ಯಮಯವಾದ ಕಲಾ ಪ್ರದರ್ಶನಗಳು ಗಮನ ಸೆಳೆದವು.
ದೇಸಿ ಅಡುಗೆ: ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಪ್ಪ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ದೇಸಿ ಅಡುಗೆ ಅಧ್ಯಾಪಕರು, ಅತಿಥಿಗಳು, ವಿದ್ಯಾರ್ಥಿಗಳ ಪಾಲಕರು, ಭೋದಕರೇತ ಸಿಬ್ಬಂದಿಗಳ ಒಡಲು ತಣಿಸಿತು.
ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.
—–