ಅನುದಿನ‌ಕವನ-೧೫೬೪, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ಖಾಲಿ ಗಾಜಿನ ಮುಂದೆ
ನಾನು…
ಮದಿರೆ ಸುರಿಯುತ್ತಿದ್ದಂತೆ
ನೋಡುತ್ತಿದ್ದೇನೆ ಇನ್ನೂ..
ಬಂಗಾರದ ಬಣ್ಣ..
ಆಗಸದ ಚಂದ್ರನೂ
ಮಧುಪಾತ್ರೆಯೊಳಗೆ ಕಾಣುವಂತೆ..
ಮದಿರೆ ತುಂಬುತ್ತ ಹೋದಂತೆ
ಜಗವೆಲ್ಲ ಖಾಲಿಯಾಗುತ್ತಿತ್ತು..

ನಾನು ಮದಿರೆಯಾಗಿದ್ದಿದ್ದರೆ..
ನೀನು ಜೊತೆಯಿರುತ್ತಿದ್ದೆ..
ಎಲ್ಲ‌ ಕಾಲದಲೂ ನೆನೆಯುತ್ತಿದ್ದೆ..‌
ಬಳಲಿದಾಗ, ದುಃಖವಾದಾಗ..
ಸಂತಸದಲ್ಲಿ…
ಪ್ರತಿ ಸಂಜೆ.. ಪ್ರತಿ ರಾತ್ರಿ..
ಎಲ್ಲಕ್ಕಿಂತ ಹೆಚ್ಚಾಗಿ..
ನನ್ನ ಜೊತೆಯಿರುತ್ತಿದ್ದೆ..

ನನ್ನ ಬಳಸಿರುತ್ತಿದ್ದೆ
ನಾನು ಮಧುಪಾತ್ರೆಯಾಗಿದ್ದರೆ..
ಹೊತ್ತಿನ ಪರಿವೆಯಿಲ್ಲದೆ
ನಾನು ಖಾಲಿಯಾದಷ್ಟೇ ವೇಗವಾಗಿ
ನನ್ನ ತುಂಬುತ್ತ..
ನನ್ನ ಬಿಸಿಯ ತಗ್ಗಿಸಲು
ಮಂಜಿನೊಂದಿಗೆ ತಂಪು ಮಾಡುತ್ತ..
ತುಟಿ ತಾಗಿಸುತ್ತ.. ನನ್ನ ಓಲೈಸುತ್ತ..

ಈಗ ನಾನು ನಾನಷ್ಟೇ…
ಒಂಟಿ..
ಮದಿರೆ ತುಂಬುತ್ತಾ…
ಇನ್ನಷ್ಟು ಖಾಲಿಯಾಗುತ್ತಾ…


-ಸಮುದ್ಯತಾ ಕಂಜರ್ಪಣೆ, ಬೆಂಗಳೂರು