ಮನೆಯಂಗಳದಲ್ಲಿ ರಂಗ ಗೌರವ: ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪಗೆ ಸನ್ಮಾನ

ಸಂಡೂರು, ಏ.13: ಜಾನಪದ ರಂಗಭೂಮಿಗೆ ಅರವತ್ತು ವರ್ಷಗಳಿಂದ ಅನುಪಮ‌ ಸೇವೆ ಸಲ್ಲಿಸುತ್ತಿರುವ ತಾಲೂಕಿನ ತಾಳೂರು ಗ್ರಾಮದ ಬಂಡ್ರಿ ಲಿಂಗಪ್ಪ ಅವರಿಗೆ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸಹಿತ ಮೂರು ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದವು.

ವಿಶ್ವ ರಂಗಭೂಮಿ‌ ದಿನಾಚರಣೆ ಅಂಗವಾಗಿ ಗ್ರಾಮದ ಕಲಾವಿದರ ಮನೆಯಂಗಳದಲ್ಲಿ ಸಂಸ್ಕೃತಿ ಪ್ರಕಾಶನ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್ ಸಹಯೋಗದಲ್ಲಿ ಶನಿವಾರ ಸಂಜೆ ಜರುಗಿದ ಸರಳ ಸಮಾರಂಭದಲ್ಲಿ ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಶಾಲು ಹೊದೆಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು.
ಮುಖ್ಯ ಅತಿಥಿ ಗಾಂಧಿ ವಿಚಾರ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಾಗರಾಜ ಬಸರಕೋಡು ಮಾತನಾಡಿ ಡಾ. ಭರಣಿ ವೇದಿಕೆ ಕಳೆದ 18 ವರ್ಷಗಳಿಂದ ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಧಕರನ್ನು ಗೌರವಿಸುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಳ್ಳಾರಿ ಜಿಲ್ಲೆಯ ಗಂಡು ಮೆಟ್ಟಿನ‌ ಕಲೆಯಾದ ಬಯಲಾಟವನ್ನು‌ ಬದಲಾದ ಕಾಲಕ್ಕನುಗುಣವಾಗಿ ಪರಿಷ್ಕೃತ ಗೊಳಿಸುವ ಅಗತ್ಯವಿದ್ದು, ಹಿರಿಯ ಬಯಲಾಟ ಕಲಾವಿದರಾದ ಬಂಡ್ರಿ ಲಿಂಗಪ್ಪ ಅವರು ಇಂತಹ ಪ್ರಯೋಗಗಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು ಮಾತನಾಡಿ, ಎಂಬತ್ತರ ಹರೆಯದ ಹಿರಿಯ ಚೇತನ ಬಂಡ್ರಿ ಲಿಂಗಪ್ಪ ಅವರು ಆರು ದಶಕಗಳಿಂದ ಹಲವು ಬಯಲಾಟಗಳಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಿದ್ದಾರೆ. ವಿಶೇಷವಾಗಿ ರತಿ ಕಲ್ಯಾಣದ ಮನ್ಮಥ ಪಾತ್ರವನ್ನು ಈ ಇಳಿ ವಯಸ್ಸಿನಲ್ಲೂ ಮನೋಜ್ಞವಾಗಿ ಅಭಿನಯಿಸುತ್ತಾರೆ ಎಂದು ಕೊಂಡಾಡಿದರು.
ಡಾ. ಭರಣಿ ವೇದಿಕೆ ಕಾರ್ಯ ತಮಗೆ ಸ್ಪೂರ್ತಿ ನೀಡಿದ್ದು ನಾಡೋಜ ದರೋಜಿ ಈರಮ್ಮ ಫೌಂಡೇಷನ್‌ ಪ್ರತಿ ವರ್ಷ ವಿಶ್ವ ಜಾನಪದ ದಿನದಂದು ಜಾನಪದ ಕಲಾವಿದರ ಮನೆಗಳಿಗೆ ತೆರಳಿ ಸತ್ಕರಿಸಲಾಗುವುದು ಎಂದು ಪ್ರಕಟಿಸಿದರು.
ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಬಯಲಾಟ ಕ್ಷೇತ್ರಕ್ಕೆ ಎಲೆಮರೆ ಕಾಯಿಯಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಂಡ್ರಿ ಲಿಂಗಪ್ಪ ಅವರನ್ನು ಗೌರವಿಸುತ್ತಿರುವುದು ಹೆಮ್ಮೆ, ಸಂತೃಪ್ತಿ ತಂದಿದೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಆಸೆ ಇಲ್ಲದೇ ಜಾನಪದ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಬಂಡ್ರಿ ಲಿಂಗಪ್ಪ ಅವರಿಗೆ ರಾಜ್ಯ, ಕೇಂದ್ರ ಸರಕಾರಗಳು, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸ ಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಲಿಂಗಪ್ಪ ಅವರ ಪುತ್ರ ಬಂಡ್ರಿ ಯಂಕಪ್ಪ, ಗ್ರಾಮದ ಯುವ ಬಯಲಾಟ ಕಲಾವಿದರಾದ ಸುದೀಪ್, ಬಂಡ್ರಿ ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.
—–