ದೊಡ್ಡವರ ದೊಡ್ಡ ಮಾತು
ಸಂವಿಧಾನ ರಚನಾ ಸಭೆಯ ಸದಸ್ಯನಾಗಿ ನಾನು ಬಂದದ್ದು ಈ ದೇಶದ ಪರಿಶಿಷ್ಟ ಜಾತಿಗಳವರ ಆಸಕ್ತಿಯನ್ನು ಕಾಪಾಡಲಿಕ್ಕಾಗಿ. ಆದರೆ, ಈ ಸಮಿತಿಯು ನನಗೆ ಇನ್ನೂ ಅತಿ ವಿಶಾಲವಾದ ಉನ್ನತವಾದ ಮತ್ತು ರಾಷ್ಟ್ರಹಿತ ಸಾಧನೆಯ ಜವಾಬ್ದಾರಿಯನ್ನು ಒಪ್ಪಿಸಿತು.ನನ್ನನ್ನು ಕರಡು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನಿಯೋಜಿಸಿತು. ನನಗೆ ಇಂಥ ಯಾವುದೇ ಮಹತ್ವಾಕಾಂಕ್ಷೆ ಇರಲಿಲ್ಲ. ಹಾಗಾಗಿ, ಹೊಸ ಜವಾಬ್ದಾರಿಯನ್ನು ನನಗೆ ನೀಡಿದಾಗ ಸಹಜವಾಗಿಯೇ ನನಗೆ ಆಶ್ಚರ್ಯವಾಯಿತು.ಅಲ್ಲದೆ ಕರಡು ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್ ಅಂಥ ನನಗಿಂತ ಹಿರಿಯರು, ದೊಡ್ಡವರು, ತಿಳಿದವರು ಇದ್ದರು. ಹೀಗಿದ್ದರೂ ನನ್ನನ್ನು ಕರಡು ಸಂವಿಧಾನ ರಚನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ದೇಶದ ಸೇವೆಯನ್ನು ಅರ್ಥಪೂರ್ಣವಾಗಿ ಮಾಡುವುದಕ್ಕೆ ನನಗೆ ಅವಕಾಶ ಒದಗಿಸಲಾಯಿತು. ಇದಕ್ಕಾಗಿ ನಾನು ಸಂವಿಧಾನ ರಚನಾ ಸಭೆಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.
ನನಗೆ ಸಂದ ಗೌರವದಲ್ಲಿ ಪಾಲುದಾರರು :
ಭಾರತಕ್ಕೆ ಕರಡು ಸಂವಿಧಾನವನ್ನು ರಚಿಸಿ ನೀಡಿದ್ದಕ್ಕಾಗಿ ನನಗೆ ಗೌರವ ಪ್ರಶಂಸೆ ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ, ಇದಕ್ಕೆ ನಾನು ಪೂರ್ಣವಾಗಿ ಭಾಜನನಲ್ಲ. ಇದರಲ್ಲಿ ಒಂದು ಪಾಲು ಸಾಂವಿಧಾನಿಕ ಸಲಹೆಗಾರರಾದ ಸರ್. ಬಿ.ಎನ್.ರಾವ್ ಅವರಿಗೆ ಸಲ್ಲಬೇಕು. ಅವರು ನೀಡಿದ ಕರಡು ಸಂವಿಧಾನವನ್ನು ನನ್ನ ಅಧ್ಯಕ್ಷತೆಯ ಕರಡು ಸಂವಿಧಾನ ರಚನಾ ಸಮಿತಿಯು ಪರಿಶೀಲನೆಗಾಗಿ ಮತ್ತು ಪರಾಮರ್ಶೆಗಾಗಿ ಸ್ವೀಕರಿಸಿತು.
ನನಗೆ ಸಂದ ಗೌರವದಲ್ಲಿ ಇನ್ನೊಂದು ಪಾಲು ಕರಡು ಸಂವಿಧಾನ ರಚನಾ ಸಮಿತಿಯಲ್ಲಿ ಸದಸ್ಯರಾಗಿ ನನ್ನ ಜೊತೆಗೆ ಕೆಲಸ ಮಾಡಿದ ಎಲ್ಲ ಮಾನ್ಯ ಸದಸ್ಯರುಗಳಿಗೆ ಸಲ್ಲಬೇಕು. 141 ದಿನಗಳಲ್ಲಿ ಕೆಲಕಾಲವಾದರೂ ಈ ಸದಸ್ಯರು ನನ್ನೊಂದಿಗೆ ಕುಳಿತು ಕರಡು ಸಂವಿಧಾನ ಪ್ರತಿಯು ಸಿದ್ಧಗೊಳ್ಳುವಲ್ಲಿ ಶ್ರಮವಹಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಹೊಸ ವಿಚಾರಗಳಿಗೆ ಮನಸ್ಸು ತೆರೆದುಕೊಂಡಿದ್ದಾರೆ ; ವಿಭಿನ್ನ ಅಂಶಗಳ ಕುರಿತು ಹೃತ್ಪೂರ್ವಕ ಚರ್ಚೆಯನ್ನು ನಡೆಸಿದ್ದಾರೆ. ಇವರ ಸಹಕಾರ,ಸಲಹೆ,ಸಹಯೋಗ ಇಲ್ಲದೆ ಕರಡು ಸಂವಿಧಾನ ರಚನಾ ಕಾರ್ಯವು ಇಷ್ಟರಮಟ್ಟಿಗೆ ಯಶಸ್ವಿಯಾಗಿ ಮುಕ್ತಾಯವಾಗುತ್ತಿರಲಿಲ್ಲ.
ಮತ್ತೊಬ್ಬ ಸಹೋದ್ಯೋಗಿಯ ಕೊಡುಗೆಯನ್ನು ನಾನು ವಿಶೇಷವಾಗಿ ಸ್ಮರಿಸಬೇಕು ಅವರು ಶ್ರೀ ಎಸ್.ಎನ್. ಮುಖರ್ಜಿ. ಕ್ಲಿಷ್ಟ, ಸಂಕೀರ್ಣ ಮತ್ತು ಸ್ಪಷ್ಟ ಪದಗಳಲ್ಲಿ ಹಾಗೂ ಪದಪುಂಜಗಳಲ್ಲಿ ಅವರು ಕರಡು ಸಂವಿಧಾನ ಸಮಿತಿಯ ಸದಸ್ಯರುಗಳ ಭಾವನೆಗಳನ್ನು ನಿರ್ದಿಷ್ಟ ಶಬ್ದಗಳಲ್ಲಿ ಹಿಡಿದಿಟ್ಟವರು. ಕಾನೂನು ಪದಕೋಶಗಳಲ್ಲಿ ಅವರು ಸಿದ್ಧಹಸ್ತರು. ಅವರ ಕಠಿಣ ಪರಿಶ್ರಮಕ್ಕೆ ಸರಿಸಾಟಿ ಇಲ್ಲ ಎನ್ನಬಹುದು. ಅವರಿಗೆ ಸಂಪೂರ್ಣ ಸಹಕಾರ ನೀಡಿದವರು ಅವರ ಸಿಬ್ಬಂದಿ ವರ್ಗ. ಅವರು ಎಷ್ಟೋ ದಿನ ಮಧ್ಯರಾತ್ರಿವರೆಗೂ ಕೆಲಸ ಮಾಡಿದ್ದಾರೆ. ನನಗೆ ದೊರಕಿರುವ ಪ್ರಶಂಸೆಯಲ್ಲಿ ಅವರಿಗೂ ಪಾಲು ದೊರಕಬೇಕು.
-ಡಾ.ಬಿ.ಆರ್.ಅಂಬೇಡ್ಕರ್
25 ನವೆಂಬರ್ 1949 ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣ.
ಅನುವಾದ : ಮಂಗ್ಳೂರು ವಿಜಯ