ಅನುದಿನ ಕವನ-೧೫೬೮, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಬೇಕಿಲ್ಲ ನಿನ್ನ ಹಂಗು

ಬೇಕಿಲ್ಲ ನಿನ್ನ ಹಂಗು

ಯಾಕೊ ಬಂಧ ಕಳಚುತಿದೆ ಸದ್ದಿಲ್ಲದೆ
ತಾಳ್ಮೆ ತಂತಿ, ಸಹನೆ ಪ್ರಜ್ಞೆ ಹೀಗೇ ಹಲವು
ನಿಲ್ಲು ಅಲ್ಲೆ ಎನ್ನಲೆ ಹೊರಬಂದರೆ ಧ್ವನಿ
ದೂಡಿ ಬಿಡಲೆ ಕೊಡವಿ ದೂರ ನಿನ್ನ
ಬೇಕಿಲ್ಲ ಸಮಯವೆ ನಿನ್ನ ಹಂಗು ಎನಗೀಗ

ಬಿಡದೆ ಬರುವ ಅದೇ ಹಗಲು ಅದೆ ರಾತ್ರಿ
ಕೊನರಿ ಚಿಗುರು ಮತ್ತೆಲ್ಲ ಕಳಚೊ ಮರ
ನೆಂದು ಹಾಗೆ ಇಳೆಯೊಡಲೊಳು ಬಿರುಕು
ಹೆಪ್ಪುಗಟ್ಟಿ ಥೇಟ್ ಮಂಜುಗಡ್ಡೆ ನಾನೀಗ
ಬೇಕಿಲ್ಲ ಸಮಯವೆ ನಿನ್ನ ಹಂಗು ಎನಗೀಗ

ತನ್ನೊಡಲ ತುಂಬಿದ ಕಲ್ಲು ಮುಳ್ಳಿನ ರಾಶಿ
ಮೇಲೆ ಹಸಿರು ಮಖಮಲ್ಲಿನ ರೇಷ್ಮೆ ತೆರೆ
ಪುಟ್ಟ ಹೂಗಳ ಚಪ್ಪರದೆದೆ ಬಿಸಿಲಿಗೊಡ್ಡಿ
ಸ್ತಬ್ಧ ಚಿತ್ರದಂತಿಹ ಪುಟ್ಟ ಗುಡ್ಡ ನಾನೀಗ
ಬೇಕಿಲ್ಲ ಸಮಯವೆ ನಿನ್ನ ಹಂಗು ಎನಗೀಗ

ಬಿಸಿಲು ಬೆಳದಿಂಗಳಂಚಿನ ಜೋಕಾಲಿ ತೂಗಿ
ಚುಕ್ಕಿ ಚಂದಿರನ ಸಿಗದ ಹುಸಿ ನೆರಳ ಹುಡುಕಿ
ಕತ್ತಲ ರಾತ್ರಿಯ ಗರ್ಭದೊಳು ಬೆಳಕ ಅರಸೊ
ಮಂಕು ಕವಿದ ಬಲು ಗಟ್ಟಿ ಮರುಳ ನಾನೀಗ
ಬೇಕಿಲ್ಲ ಸಮಯವೆ ನಿನ್ನ ಹಂಗು ಎನಗೀಗ ಬೇಕಿಲ್ಲ!

-ಸರೋಜಿನಿ ಪಡಸಲಗಿ,
ಬೆಂಗಳೂರು