ಹಾಸನ: ಸಾಹಿತಿ ಬಾನು ಮುಷ್ತಾಕ್ ಅವರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

ಹಾಸನ, ಏ.16: ಪ್ರತಿಷ್ಟಿತ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದ್ದ ಸಾಹಿತಿ ಬಾನುಮುಷ್ತಾಕ್ ಅವರ ಸಣ್ಣ ಕಥೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ ಕೃತಿ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನಗರದ ಬಾನುಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ, ಅಮೃತ ಬೀಜ ಕೃತಿ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಗಡೂರು ಅವರು, ಹಾಸನದಿಂದ ಪಿ.ಲಂಕೇಶ್ ಪತ್ರಿಕೆಯ ವರದಿಗಾರರಾಗಿದ್ದ ಭಾನುಮುಷ್ತಾಕ್ ಅವರು ವಕೀಲರಾಗಿ, ನಗರಸಭೆ ಸದಸ್ಯರಾಗಿ ಹಾಗೂ ಪ್ರಗತಿಪರ ಸಾಹಿತಿಯಾಗಿ ಗುರುತಿಸಿಕೊಂಡವರು. ಅನ್ಯಾಯದ ವಿರುದ್ದ ಧ್ವನಿ ಎತ್ತಿದವರು. ಸಂಘಟಕಿಯಾಗಿಯೂ ಕೆಲಸ ಮಾಡಿದವರು. ಅವರ ಕೃತಿ ಬುಕರ್ ಪ್ರಶಸ್ತಿಯ ಹೊಸ್ತಿಲಿನ ತನಕ ಬಂದು ನಿಂತಿರುವುದು ಹೆಮ್ಮೆಯ ಸಂಗತಿ ಎಂದರು.
ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ ಹಸೀನಾ ಚಲನಚಿತ್ರ ಕಥೆ ಕೂಡ ಬಾನುಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳಿಂದಲೇ ಆಯ್ಕೆ ಮಾಡಿದ್ದು. ಹಸೀನಾ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಾಗ ಇಡೀ ತಂಡವನ್ನು ಹಾಸನಕ್ಕೆ ಆಹ್ವಾನಿಸಿದ್ದ, ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಕಲಾಭವನದಲ್ಲಿ ಏರ್ಪಡಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಿತ್ತು. ಅದೆಲ್ಲವೂ ಮರೆಯಲಾಗದ ಕ್ಷಣ ಎನ್ನುವುದನ್ನು ತಗಡೂರು ಸ್ಮರಿಸಿದರು.
ಬಾನುಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಕೃತಿ ಬುಕರ್ ಪ್ರಶಸ್ತಿಗೆ ಭಾಜನವಾಗಲಿ ಎಂದು ಇದೇ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.
ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಮಂಜುನಾಥ್, ಫ್ರಂಟ್ ಲೈನ್ ಮ್ಯಾಗಜಿನ್ ವರದಿಗಾರ ವಿಕಾರ್ ಅಹಮದ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು
—–