ಕಡಲಿಗೆ ಮುಖ ಮಾಡಿ
ಕುಳಿತಿದ್ದೇನೆ
ಕಿವಿಯ ಹಿಂದೆ ಗುಂಯ್ ಎಂದು ಶಬ್ದ
ಮಾಡುತ್ತಿದೆ
ಟ್ಯೂನ್ ಮಾಡದ ಯಾವುದೋ
ಒಂದು ಒಂಟಿ ಹಾಡು.
ಅವನು ಹಚ್ಚಿದ ಜ್ವಾಲೆ
ಹೊತ್ತಿ ಉರಿಯುತ್ತಿದೆ.
‘ಸ್ವಲ್ಪ ದೂರ ನಡೆಯೋಣ
ಮರಳ ಮೇಲೆ’
ತಿರುಗಿ ನೋಡಿದರೆ, ಯಾರೂ ಇಲ್ಲ.
ಇಲ್ಲ, ಎಲ್ಲ ಭ್ರಮೆ.
ಸಂಜೆ ಸೂರ್ಯ,
ವಿದಾಯ ಹೇಳುವುದಕ್ಕೇ
ಬಂದಂತಿದೆ.
ಎಲ್ಲ ಮುಗಿದುಹೋಯಿತೇ,
ಇನ್ನೇನಾದರು ಉಳಿದಿದೆಯೇ?
ಕತ್ತಲು ನಿಶ್ಯಬ್ದವಾಗಿ
ಆವರಿಸುತ್ತಿದೆ.
ಅವನು ಹಚ್ಚಿದ ಜ್ವಾಲೆ
ಆರಿ ಹೋಗುವ ಮುನ್ನ,
ಸುಡಲಿ ನನ್ನನ್ನು;
ಎಲ್ಲದನ್ನೂ ಸುಟ್ಟುಹೋಗಲಿ,
ನೆನಪಿನ ಒಂದೇ ಒಂದು
ತುಣುಕೂ ಉಳಿಯದಂತೆ.
ಯಾಕೆ, ಧಗಧಗಿಸುವ ಈ-
ಬೆಂಕಿ ನನ್ನನ್ನು
ಇಡಿಯಾಗಿ ಸುಡುತ್ತಿಲ್ಲವೇಕೆ?
-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು