ಅನುದಿನ ಕವನ-೧೫೭೨, ಕವಿ: ಸುರೇಶ ಗೌತಮ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಅವ್ವ

ನನ್ನ ಅವ್ವ

ಅವ್ವನ ಮೊಲೆ ಹಾಲ
ಹನಿ ಹನಿಯಲ್ಲೂ
ಸಂವಿಧಾನದ ಆಶಯ
ಸ್ವಾತಂತ್ರ್ಯ… ಸಮಾನತೆ… ಸಹೋದರತೆ…

ಅವಳ
ದೃಷ್ಟಿಯ ಚಿತ್ರದಲ್ಲಿ
ಕಂಡಷ್ಟೂ ಬೆತ್ತಲೆ
ದೇವರ ದರ್ಭಾರಿಲ್ಲದ ಊರು ರಾಜಸಿಂಹಾಸನವಿಲ್ಲದ ಸೂರು

ಮೂರೊತ್ತು ಉಣ್ಣುವ ಶಕುತಿ
ಎದೆಗಿಲ್ಲದಿದ್ದರೂ
ಬೋಳೆ ಶಾಸ್ತ್ರಗಳ ಬಳಿ
ಕೈಚಾಚಿ ನಿಂತವಳಲ್ಲ
ನೆತ್ತಿ ಮೇಲೆ ಪ್ರೀತಿಯ ಗಂಟು ಹೊತ್ತು
ನಗುತ್ತಾಳೆ, ಸುಡು ಬಿಸಿಲಲ್ಲೂ

ಎದೆಯೊಳಗೆ
ಎರಡು ಅಕ್ಷರದ ಗಂಧವಿಲ್ಲ
ಭಗವದ್ಗೀತೆ ಓದಲಿಲ್ಲ
ವೇದಗಳ ಗುರುತಿಲ್ಲ
ಆದರೂ
ಬೋಧಿಸುತ್ತಾಳೆ

ಹೊಲ ಕೆರೆ ಹಳ್ಳ ಕೊಳ್ಳ
ದನಕರ ಸೂರ ಚಂದ್ರ
ಕಲ್ಲು ಮಣ್ಣು ಧೂಳು
ಊರುಕೇರಿ ಸುತ್ತಿ ಕಲಿತಿದ್ದಾಳೆ

ಬದುಕುತ್ತಿದ್ದಾಳೆ
ಉಸಿರೆಳೆದು ಬಿಡುತ್ತಾ
ನೂರಾರು ಕನಸುಗಳ ನಡುವೆ
ಸಮಾನತೆಯ ಕನಸು ಕಾಣುತ್ತಾ….

-ಸುರೇಶ ಗೌತಮ್, ಬೆಂಗಳೂರು                     (ಹೆಸರಾಂತ ಪತ್ರಕರ್ತ, ಸಾಹಿತಿ ಶ್ರೀ ಪಿ. ಲಂಕೇಶ್ ಅವರ ಅವ್ವನ ಪ್ರಭಾವದಿಂದ 2013ರಲ್ಲಿ ರಚಿಸಿದ್ದ ಕವನ ‘ನನ್ನ ಅವ್ವ’ )