ಧಾರವಾಡದ ಮಳೆ
ಧಾರವಾಡದ ಮಳೆ ಎಂದರೆ
ಭೂಮಿ ಆಕಾಶವ ಒಂದು ಮಾಡಿದಂತೆ
ಮಳೆಯನ್ನೊತ್ತ ಗಾಳಿ
ಗಿಡ ಮರಗಳನ್ನೆಲ್ಲಾ ಮೈ ಕೊಡವಿ
ಎಬ್ಬಿಸಿದಂತೆ
ಸಮುದ್ರದಲೆ ನೀರ್ಗಲ್ಲಿಗೆ ಅಪ್ಪಳಿಸಿದಂತೆ
ರಭಸವೋ ರಭಸ!
ಇಳಿದು ಬಾ ತಾಯೆ ಎಂದು
ಮೃದುವಾಗಿ ಕೇಳಿದರೆ
ಕೇಳುವ ಮಗಳಲ್ಲ ಬಿಡು
ಸದ್ದಡಗಿಸಿ ತಣಿಸಬೇಕು
ಜಗದ ಹೃದಯ
ಗುಡುಗು ಸಿಡಿಲು ಮಿಂಚು
ಎಲ್ಲವೂ ಜೋಗಿಯ ಮಾಯದ ಕಿನ್ನರಿ ತೆರದಿ
ನುಡಿಸಬೇಕು ನುಡಿಯ
ನುಡಿ ಕಂಡಾಯದ ಗಿರಿಯ
ಆಹಾ…
ಕಡು ಮೋಹದ ಕಡು ಚೆಲ್ವೆಯೇ
ಕುಣಿ ಕುಣಿದಾಡುವ ಪಾತರಗಿತ್ತಿಯೇ
ಕುಂಬಾರ ಗುಂಡಯ್ಯನ ರಗಳೆಯ ಹಾಗೆ
ಡಮರುಗ ಢಂ ಢಂ ಡಣಲೆನೆ ಎಂದಂತೆ
ಘಟಂ ವಾದ್ಯವು ಮೊಳಗಿ ಲೋಕ ತಲ್ಲಣಿಸಿದಂತೆ
ನಿಟ್ಟುಸಿರು ಬಿಟ್ಟ ಮಳೆಯೇ
ಪ್ರಕೃತಿಯೆಲ್ಲಾ ಹಸಿರು ಹೊನ್ನಿನ ಕಳೆಯೇ.
ಡಾ.ನಿಂಗಪ್ಪ ಮುದೇನೂರು, ಧಾರವಾಡ
—–