ಅನುದಿನ ಕವನ-೧೫೭೫, ಹಿರಿಯ ಕವಿ: ಮಹಿಮ, ಬಳ್ಳಾರಿ

ಇದು ಮಹಾತಿರುವು
ತಿರುವು ದಾಟಿದರೆ ಸತ್ಯ,ನ್ಯಾಯ ,ಧರ್ಮಗಳ ಪುಣ್ಯ ಲೋಕ..

ಇಲ್ಲಿಯವರೆಗೆ ಬಂದಿದ್ದೀರಿ
ಇನ್ನೂ ನಾಲ್ಕು ಹೆಜ್ಜೆ ಹಾಕಿಬಿಡಿ
ಬರೀ ನಾಲ್ಕೇ ನಾಲ್ಕು ಹೆಜ್ಜೆ..

ಅಲ್ಲಿ ಸ್ವಾರ್ಥ ಮೋಸ,
ದ್ರೋಹ ಹಿಂಸೆಗಳು ಇಲ್ಲವೇ ಇಲ್ಲ
ಅಲ್ಲಿ ನೆಮ್ಮದಿಯಿಂದ ಬದುಕ ಸಾಗಿಸೋಣ ಬನ್ನಿ‌..

ಯಾಕೆ ಎಲ್ಲರೂ ಮೌನ ಮಾತನಾಡುತ್ತಲೇ ಇಲ್ಲ ಯಾರೊಬ್ಬರೂ..
ಮುನಿಸೇ ನನ್ನ ಮೇಲೆ..
ಬಹುದೂರ ನಡೆಸಿಬಿಟ್ಟನೆಂದು…
ಇನ್ನೇನು ಬಂದೇ ಬಿಟ್ಟಿತು
ಬರೀ ನಾಲ್ಕು ಹೆಜ್ಜೆ..
ಬೇಗ ಬೇಗ ಬಂದುಬಿಡಿ

ಯಾರೊಬ್ಬರೂ ‌ಮಾತನಾಡುತ್ತಿಲ್ಲ

ಹಿಂತಿರುಗಿ ನೋಡಿದೆ
ಯಾರೊಬ್ಬರೂ ಕಾಣಿಸುತ್ತಿಲ್ಲ..
ದೂರದಲ್ಲಿ ಅವರುಗಳು ಹಿಂದಿರುಗಿ ಓಡುತ್ತಿರುವುದು ಕಾಣಿಸಿತು..

ಅವರಿಷ್ಟದ ಬದುಕು
ಅಲ್ಲಿಯೇ ಇದೆ..
ಅವರಿಷ್ಟದ ಬದುಕಿನ ಕಡೆ ಅವರುಗಳು ಓಡುತ್ತಿದ್ದಾರೆ..
ಹೀಗೆ ಓಡುವಾಗ ಅವರುಗಳಿಗೆ ಆಯಾಸವಾಗುತ್ತಿಲ್ಲ..
ನಾಲ್ಕು ಹೆಜ್ಜೆ ಹಾಕಲು ಅವರಿಗೆ ಆಯಾಸವಾಗಿತ್ತು..

ಹೋಗಲಿಬಿಡಿ
ಓಡಿಹೋಗಲಿ ಬಿಡಿ
ನಾನಿನ್ನು ಕೂಗಿ ಕರೆಯಲಾರೆ

ಸತ್ಯ ,ಧರ್ಮ,ನ್ಯಾಯಗಳ ಲೋಕ
ಪರಿಶುದ್ಧವಾಗಿರಲಿ..

-ಮಹಿಮ, ಬಳ್ಳಾರಿ