ಬಳ್ಳಾರಿ, ಏ.24: ದೇಶದ ಹಲವು ಜ್ವಲಂತ ಸಮಸ್ಯೆಗಳಿಗೆ ಡಾ. ಅಂಬೇಡ್ಕರ್ ಚಿಂತನೆಗಳಿಂದ ಪರಿಹಾರವಿದೆ ಎಂದು ವಿಎಸ್ ಕೆ ವಿವಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹೆಚ್. ತಿಪ್ಪೇಸ್ವಾಮಿ ಅವರು ತಿಳಿಸಿದರು.
ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ, ಎನ್ ಎಸ್ ಎಸ್ ಘಟಕಗಳು ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರು
ದೇಶ ಸುಭದ್ರ ಹಾಗೂ ಸುಭೀಕ್ಷವಾಗಿರಲು ಅತ್ಯುತ್ತಮ ಸಂವಿಧಾನ ರಚಿಸಿದರು ಎಂದು ಹೇಳಿದರು.
ಬಹುಮುಖ ಪ್ರತಿಭೆಯ ಡಾ. ಅಂಬೇಡ್ಕರ್ ಅವರು ಸಮಾನತೆ, ಸಾಮಾಜಿಕ ನ್ಯಾಯದಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಖಚಿತವಾಗಿ ನಂಬಿದ್ದರು ಎಂದರು.
ಆರ್ಥಿಕ ತಜ್ಞರಾಗಿದ್ದ ಬಾಬಾಸಾಹೇಬರ ಸಂಶೋಧನೆ, ಅಧ್ಯಯನ ಫಲವಾಗಿ ಆರ್ ಬಿ ಐ ಸ್ಥಾಪನೆಗೊಂಡಿದೆ. ಪತ್ರಿಕೋದ್ಯಮ, ನೀರಾವರಿ ಕ್ಷೇತ್ರಗಳಿಗೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ದೇಶದ ಎಲ್ಲಾ ಜಾತಿಯ ಮಹಿಳೆಯರು ಮತ್ತು ಶೋಷಿತ ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ ಮಹಾ ಮಾನವತಾವಾದಿ ಡಾ.ಅಂಬೇಡ್ಕರ್ ಅವರು ಎಂದು ಕೊಂಡಾಡಿದರು.
ಗೌತಮ ಬುದ್ಧ ಮತ್ತು ಬಸವಣ್ಣ ಅವರ ಸಮಸಮಾಜದ ಕನಸನ್ನು ಡಾ.ಅಂಬೇಡ್ಕರ್ ಅವರು ತಮ್ಮ ರಚನೆಯ ಸಂವಿಧಾನದ ಮೂಲಕ ನನಸು ಮಾಡಿದ ದಾರ್ಶನಿಕರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಹ್ದಾದ ಚೌಧರಿ ಅವರು, ಮಹಿಳೆಯರ ಸಬಲೀಕರಣ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಮಹತ್ವದ ಬೆಳವಣಿಗೆಯಲ್ಲಿ ಡಾ. ಅಂಬೇಡ್ಕರ್ ಅವರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಪ್ರಸ್ತುತ ದೇಶ ಒಗ್ಗಟ್ಟಾಗಿರಲು ಕಾರಣ ಡಾ. ಅಂಬೇಡ್ಕರ್ ಅವರು ರಚಿಸಿದ ವಿಶ್ವದಲ್ಲೇ ಶ್ರೇಷ್ಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಸಂವಿಧಾನ ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ ಎಚ್ ಸೋಮನಾಥ ಅವರು ಕಾಲೇಜಿನಲ್ಲಿ ಪ್ರತಿ ವರ್ಷ ಆಚರಿಸಲ್ಪಡುವ ಡಾ. ಅಂಬೇಡ್ಕರ್ ಜಯಂತಿಗೆ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಐದು ಸಾವಿರ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ದೇಶದ ಪ್ರತಿಯೊಬ್ಬರ ಕ್ಷೇಮ ಬಯಸಿದ ವಿಶ್ವ ಜ್ಞಾನಿ ಡಾ.ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡುವ ಷಡ್ಯಂತ್ರ ನಡೆಯುತ್ತಿರುವುದಕ್ಕೆ ವಿಷಾಧಿಸಿದರು.
ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಡಾ.ತಿಪ್ಪೇಸ್ವಾಮಿ ಅವರನ್ನು ಕಾಲೇಜು ವತಿಯಿಂದ ಪ್ರಾಚಾರ್ಯರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕಿ ಪ್ರೊ. ಜಯಶ್ರೀ, ಎನ್ ಎಸ್ ಎಸ್ ಸಂಚಾಲಕರಾದ ಪ್ರೊ. ನಾಜಿಯಾ ಖಾಜಿ, ಪ್ರೊ. ಚನ್ನಬಸವಯ್ಯ ಹೆಚ್ ಎಂ, ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ. ದುರುಗಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು ಇದ್ದರು.
ವಿದ್ಯಾರ್ಥಿನಿ ಬಿಂದು ಪ್ರಾರ್ಥಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಪ್ರವೀಣ್ ಕುಮಾರ್ ಎನ್ ಸ್ವಾಗತಿಸಿದರು. ಎನ್ಎಸ್ ಎಸ್ ಸಂಚಾಲಕ ಪ್ರೊ. ರಾಮಸ್ವಾಮಿ.ಬಿ ವಂದಿಸಿದರು. ವಿದ್ಯಾರ್ಥಿನಿ ಗಾಯತ್ರಿ ನಿರೂಪಿಸಿದರು.