ಹಗರಿಬೊಮ್ಮನಹಳ್ಳಿ: ತಾಲೂಕಿನ ಅಂಕಸಮುದ್ರದಲ್ಲಿ 13 ವರ್ಷ 3 ತಿಂಗಳ ಬಾಲಕಿಯ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 9 ಜನರ ಮೇಲೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲ್ಯವಿವಾಹವಾದ ಅಪ್ರಾಪ್ತ ಬಾಲಕಿಯ ತಂದೆ, ಮದುವೆಯಾದ ಗಂಡ ಸೇರಿದಂತೆ ಈ ಬಾಲ್ಯವಿವಾಹಕ್ಕೆ ಕಾರಣರಾದ 9 ಜನರ ಮೇಲೂ ಮೂರು ದಿನಗಳ ಹಿಂದೆ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಶರಣಮ್ಮ ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರುಗೇರಿಯ ಸಂತೋಷ ಎನ್ನುವವರ ಜತೆಗೆ 13 ವರ್ಷದ ಅಪ್ರಾಪ್ತ ಬಾಲಕಿಯ ಮದುವೆಯು ಕಳೆದ ಮೇ 23ರಂದು ತಾಲೂಕಿನ ಜಿ.ಕೊಡಿಹಳ್ಳಿ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ನಡೆದಿತ್ತು. ಇತ್ತೀಚೆಗೆ ಬಾಲ್ಯವಿವಾಹ ಪ್ರಕರಣವೆಂದು ಬೆಳಕಿಗೆ ಬಂದಿತ್ತು. ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,ತನಿಖೆ ಮುಂದುವರೆದಿದೆ