ಬಳ್ಳಾರಿ ಗ್ರಾಪಂ ಚುನಾವಣಾ ಸಿದ್ಧತೆ ಪರಿಶೀಲಿಸಿದ ವೀಕ್ಷಕ ಸುರೇಶ ಕುಮಾರ್: ಶಾಂತಿಯುತ,ಸುಸೂತ್ರ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ

ಬಳ್ಳಾರಿ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಅಧಿಕಾರಿಗಳು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಬಂದಿರುವ ಚುನಾವಣಾ ವೀಕ್ಷಕ ಕೆ.ಎಂ.ಸುರೇಶಕುಮಾರ್ ಅವರು ಜಿಲ್ಲೆಯಲ್ಲಿ ಶಾಂತಿಯುತ ಮತ್ತು ಸುಸೂತ್ರವಾಗಿ ಚುನಾವಣೆಗಳು ಜರುಗುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಬಳ್ಳಾರಿ ತಾಲೂಕು ವ್ಯಾಪ್ತಿಯ ಗ್ರಾಪಂ ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಬಳ್ಳಾರಿ ತಾಲೂಕಿನಲ್ಲಿ ಮೂಲ ಹಾಗೂ ಹೆಚ್ಚುವರಿ ಮತಗಟ್ಟೆಗಳು ಸೇರಿ 261 ಮತಗಟ್ಟೆಗಳಿದ್ದು,ಅವುಗಳಲ್ಲಿ 40 ಅತಿಸೂಕ್ಷ್ಮ ಮತ್ತು 71 ಅತಿಸೂಕ್ಷ್ಮ ಮತಗಟ್ಟೆಗಳು ಹಾಗೂ 150 ಸಾಮಾನ್ಯ ಮತಗಟ್ಟೆಗಳಿವೆ. ಆದರೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಮೇಲೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ವಿಡಿಯೋ ದಾಖಲೀಕರಣ,ಪೊಲೀಸ್ ಬಂದೋಬಸ್ತ್ ಸೇರಿದಂತೆ ಇನ್ನೀತರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. ಪ್ರತಿ ಮತಗಟ್ಟೆಗಳಲ್ಲಿಯೂ ಅಗತ್ಯ ಸೌಕರ್ಯಗಳಿರಬೇಕು;ಯಾವುದೇ ರೀತಿಯ ದೂರುಗಳಿಗೆ ಅಸ್ಪದ ನೀಡದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
*ರೌಡಿಶೀಟರ್‍ಗಳು,ಪ್ರಚೋದಕರ ಮೇಲೆ ಕ್ರಮ: ಚುನಾವಣಾ ಸಂದರ್ಭದಲ್ಲಿ ಸಾಮಾಜಿಕವಾಗಿ ಶಾಂತಿ ಕದಡುವ ರೌಡಿಶೀಟರ್‍ಗಳನ್ನು ಮತ್ತು ಗ್ರಾಪಂ ಮಟ್ಟದಲ್ಲಿ ಚುನಾವಣಾ ನೆಪದಲ್ಲಿ ಪ್ರಚೋದನೆ ನೀಡುವ ಮತ್ತು ಕೆಟ್ಟ ವಾತಾವರಣ ಸೃಷ್ಟಿಸುವವವರನ್ನು ಗುರುತಿಸಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂತವರ ಮೇಲೆ ಕ್ರಮಕೈಗೊಳ್ಳುವುದರಿಂದ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಜರುಗಲಿದೆ ಎಂದು ಹೇಳಿದ ಅವರು ಚುನಾವಣಾ ಹಿನ್ನೆಲೆ ಶಸ್ತ್ರಾಸ್ತ್ರ ಠೇವಣಿ ಮಾಡಿರುವುದಕ್ಕೆ ಸಂಬಂಧಿಸಿದಂತೆಯೂ ಮಾಹಿತಿ ಪಡೆದರು.
*ಎಂಸಿಸಿ ಉಲ್ಲಂಘನೆ ಮತ್ತು ಅಬಕಾರಿ ದಾಳಿ ವರದಿ ಪ್ರತಿನಿತ್ಯ ನೀಡಿ: ಜಿಲ್ಲೆಯಲ್ಲಿ ಇದುವರೆಗೆ ಗ್ರಾಪಂ ಚುನಾವಣಾ ಹಿನ್ನೆಲೆ ಆಗಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವರದಿ ಮತ್ತು ಅಬಕಾರಿ ಇಲಾಖೆಯಿಂದ ನಡೆಯುವ ದಾಳಿಗಳು ಮತ್ತು ವಶಪಡಿಸಿಕೊಂಡ ಮದ್ಯ ಹಾಗೂ ಹಣ ಹಾಗೂ ಇನ್ನೀತರ ಮಾಹಿತಿಗಳನ್ನು ಕ್ರೋಢೀಕರಿಸಿ ಪ್ರತಿನಿತ್ಯ ತಮ್ಮ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಚುನಾವಣಾ ವೀಕ್ಷಕ ಸುರೇಶಕುಮಾರ್ ಅವರು ಸೂಚಿಸಿದರು.
ಕುರುಗೋಡುವ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದ ಸದಸ್ಯ ಸ್ಥಾನಗಳ ಹರಾಜು ಪ್ರಕರಣ ಹಾಗೂ ಅದರ ಮೇಲೆ ಕೇಸ್ ದಾಖಲಾಗಿರುವುದನ್ನು ಹಾಗೂ ಇನ್ನೀತರ ಇದುವರೆಗಿನ ಎಂಸಿಸಿ ಉಲ್ಲಂಘನೆ ಪ್ರಕರಣಗಳು ಹಾಗೂ ಪೊಲೀಸ್ ಇಲಾಖೆ ಕೈಗೊಂಡಿರುವ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಚುನಾವಣಾ ವೀಕ್ಷಕರ ಗಮನಕ್ಕೆ ತಂದರು.
ಅಬಕಾರಿ ಇಲಾಖೆ ವತಿಯಿಂದ ಬಳ್ಳಾರಿ ತಾಲೂಕಿನಲ್ಲಿ 4 ತಂಡಗಳನ್ನು ರಚಿಸಲಾಗಿದೆ.ಅಕ್ರಮ ಮದ್ಯ ಮಾರಾಟ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಪ್ರತಿನಿತ್ಯ ನಡೆದ ದಾಳಿ,ವಶಪಡಿಸಿಕೊಂಡ ಹಣ ಹಾಗೂ ಇನ್ನೀತರ ಮಾಹಿತಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಅಬಕಾರಿ ಇನ್ಸಪೆಕ್ಟರ್ ಶಂಕರ ದೊಡ್ಡಮನಿ ತಿಳಿಸಿದರು.
ಬಳ್ಳಾರಿ ಉಪವಿಭಾಗೀಯ ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಅವರು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಐದು ತಾಲೂಕುಗಳಲ್ಲಿ ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಸಿದ್ಧತೆಗಳು, ಚುನಾವಣಾ ಸಿಬ್ಬಂದಿ ನೇಮಕ ಮತ್ತು ತರಬೇತಿ, ಮಸ್ಟರಿಂಗ್,ಡಿಮಸ್ಟರಿಂಗ್,ಸ್ಟ್ರಾಂಗ್ ರೂಂ, ಮತ ಎಣಿಕೆ ಸಿದ್ಧತೆಗಳ ಕುರಿತು ಚುನಾವಣಾ ವೀಕ್ಷಕರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಹಾನ್ ಪಾಶಾ, ತಾಪಂ ಇಒ ಮಡಗಿನ ಬಸಪ್ಪ, ಚುನಾವಣಾ ವೀಕ್ಷಕರ ಲೈಸನಿಂಗ್ ಅಧಿಕಾರಿ ವಾಗೀಶ ಶಿವಾಚಾರ್ಯ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.
ಚುನಾವಣಾ ವೀಕ್ಷಕರಾದ ಸುರೇಶಕುಮಾರ್ ಅವರು ಸಭೆಯ ನಂತರ ಮಸ್ಟರಿಂಗ್,ಡಿಮಸ್ಟರಿಂಗ್, ಸ್ಟ್ರಾಂಗ್ ರೂಂ ಹಾಗೂ ಮತ ಎಣಿಕೆ ನಡೆಯಲಿರುವ ಕೋಟೆ ಆವರಣದಲ್ಲಿರುವ ಸಂತ್ ಜಾನ್ ಶಾಲೆಗೆ ಭೇಟಿ ನೀಡಿ ಇದುವರೆಗೆ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ನಂತರ ಅವರು ಕೊಳಗಲ್ಲು ಗ್ರಾಮದ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.