ಬಳ್ಳಾರಿ: ಬಳ್ಳಾರಿ ನಗರದಲ್ಲಿ ತ್ಯಾಜ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಮಹಾನಗರ ಪಾಲಿಕೆಯು ಸ್ವೀಪಿಂಗ್ ಮಶೀನ್ ಯಂತ್ರದ ಮೂಲಕ ನಗರದ ರಸ್ತೆಗಳಲ್ಲಿ ಕಸಗೂಡಿಸುತ್ತಿದೆ. ಈ ಮೂಲಕ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಾರ್ಯಕ್ಕೆ ಮುಂದಾಗಿದೆ.
ಕಳೆದ ಕೆಲವರ್ಷಗಳಿಂದ ದುರಸ್ತಿಯಾಗಿ ಮೂಲೆ ಸೇರಿದ್ದ ಟಿಪಿಎಸ್ ಕಂಪನಿಯ ಕಸಗುಡಿಸುವ ಯಂತ್ರವನ್ನು ತ್ವರಿತಗತಿಯಲ್ಲಿ ರಿಪೇರಿ ಮಾಡಿಸಿ ರಸ್ತೆಗೆ ಬಿಡಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ
ಕಸಗೂಡಿಸುವ ಸ್ವೀಪಿಂಗ್ ಮಶೀನ್ ನಗರದ ಪ್ರಮುಖ ರಸ್ತೆಗಳಲ್ಲಿನ ಕಸವನ್ನು ರಾತ್ರಿ ವೇಳೆಯಲ್ಲಿ ಸ್ವಚ್ಛಗೊಳಿಸುತ್ತಿದೆ.
ರಾತ್ರಿ ಸಮಯದಲ್ಲಿ ಸ್ವೀಪಿಂಗ್ ಮಶೀನ್ ಮೂಲಕ ಕಸಗೂಡಿಸುವ ಕಾರ್ಯ ಮಂಗಳವಾರ ರಾತ್ರಿಯಿಂದಲೇ ನಗರದ ವಿವಿಧ ರಸ್ತೆಗಳಲ್ಲಿ ಆರಂಭವಾಗಿದೆ.
ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರೇ ಖುದ್ದಾಗಿ ನಗರದ ವಿವಿಧ ರಸ್ತೆಗಳಲ್ಲಿ ಸ್ವೀಪಿಂಗ್ ಮಶೀನ್ ಮೂಲಕ ಕಸಗೂಡಿಸುವ ಕಾರ್ಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತ್ಯಾಜ್ಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ನಗರದ ಮುಖ್ಯ ರಸ್ತೆಗಳಲ್ಲಿ ನ ಕಸ ಗುಡಿಸುವುದನ್ನು ಯಾಂತ್ರೀಕರಣ ಗೊಳಿಸುವುದು ಕೂಡ ಒಂದು ಉದ್ದೇಶವಾಗಿತ್ತು;ಅದನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿನ ಕಸವನ್ನು ರಾತ್ರಿ ವೇಳೆ ಸ್ವೀಪಿಂಗ್ ಮಷೀನ್ ಮೂಲಕ ಸ್ವಚ್ಛಗೊಳಿಸುವುದರಿಂದ ಮುಖ್ಯ ರಸ್ತೆಗಳಲ್ಲಿ ಕಸ ಹಾಗೂ ಧೂಳಿನ ತೊಂದರೆ ಕಡಿಮೆಯಾಗುವ ನಿರೀಕ್ಷೆ ಇದೆ ಹಾಗೂ ಮುಖ್ಯ ರಸ್ತೆಗಳಲ್ಲಿ ಕಸ ಗುಡಿಸುವ ಪೌರಕಾರ್ಮಿಕರ ಮೇಲಿನ ಕೆಲಸದ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ಇದೆ.