ಬಳಾರಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಜಿಲ್ಲಾಡಳಿತ,ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಬೀದಿನಾಟಕ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಚಿಗುರು ಕಲಾತಂಡ ಮತ್ತು ಜನನಿ ಪುಷ್ಪಕಲಾ ಯುವಕ ಸಂಘದ ಕಲಾವಿದರು ಮತದಾನದ ಮಹತ್ವ,ಯೋಗ್ಯ ಅಭ್ಯರ್ಥಿಗೆ ಮತದಿಂದಾಗುವ ಉಪಯೋಗಗಳು, ಆಮೀಷದಿಂದ ಮುಂದೆ ಅನುಭವಿಸಬೇಕಾದ ಸಮಸ್ಯೆಗಳು, ತಮ್ಮ ಗ್ರಾಮದ ಅಭಿವೃದ್ಧಿ ಬಗ್ಗೆ ನೈಜ ಕಾಳಜಿ ಉಳ್ಳವರಿಗೆ ಮತಚಲಾಯಿಸಬೇಕಾದ ಅನಿವಾರ್ಯತೆ ಹಾಗೂ ಕಡ್ಡಾಯ ಮತದಾನ ಸೇರಿದಂತೆ ಮತದಾನ ಸಂಬಂಧಿತ ವಿವಿಧ ವಿಷಯಗಳ ಕುರಿತು ಬೀದಿನಾಟಕ ಹಾಗೂ ಜಾನಪದ ಸಂಗೀತದ ಹಾಡುಗಳ ಮೂಲಕ ಅರಿವು ಮೂಡಿಸಿದರು.
ಮತದಾನ ಪಟ್ಟಿಗೆ ಹೆಸರು ಸೇರ್ಪಡೆ,ವೋಟಿಂಗ್ ಐಡಿ ಸ್ಥಳಾಂತರ ಮತ್ತು ಕ್ಯಾನ್ಸಲ್ ಮಾಡುವಿಕೆ ಸೇರಿದಂತೆ ಅನೇಕ ವಿಷಯಗಳ ಕುರಿತು ಕಲಾವಿದರು ತಮ್ಮ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯಿಂದ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತದಾರರು ತಮ್ಮ ಮತವನ್ನು ಉತ್ತಮ ಅಭ್ಯರ್ಥಿಗೆ ಚಲಾಯಿತಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ತಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ತಪ್ಪದೇ ಎಲ್ಲರೂ ಕಡ್ಡಾಯವಾಗಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ಆಮಿಷಗಳಿಗೆ ಮಾರುಹೋಗದೇ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಮಾರೆಪ್ಪ, ಗ್ರಾಪಂ ಬಿಲ್‌ಕಲೆಕ್ಟರ್ ಹುಲುಗಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.
—