ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬಸ್ಸುಗಳ ಸರಣಿ ಅಪಘಾತ: ಎಂಟು ಪ್ರಯಾಣಿಕರಿಗೆ ಗಾಯ

  1. ಕೂಡ್ಲಿಗಿ: ಲಾರಿ ಮತ್ತು ಬಸ್ ಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಎಂಟು ಜನ ಗಾಯಗೊಂಡ ಘಟನೆ ಸಮೀಪದ ಅಮ್ಮನಕೇರಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಸುಕಿನಜಾವ ಜರುಗಿದೆ.
    ಭತ್ತ ತುಂಬಿಕೊಂಡು ಬೆಂಗಳೂರು ಕಡೆ ಹೊರಟಿದ್ದ ಲಾರಿಯ ಹಿಂಬದಿಗೆ ಖಾಸಗಿ ಬಸ್ಸೊಂದು ಡಿಕ್ಕಿಹೊಡೆದು ನಿಂತಾಗ, ಹಿಂದೆ ಬರುತ್ತಿದ್ದ ವಿ ಆರ್ ಎಲ್ ನ ಬಸ್ಸೊಂದು ಡಿಕ್ಕಿ ಹೊಡೆದ ಸರಣಿ ಅಪಘಾತದಲ್ಲಿ ಎಂಟು ಜನ ಪ್ರಯಾಣಿಕರಿಗೆ ಗಾಯವಾಗಿದ್ದು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂದಗಿಯಿಂದ ಬೆಂಗಳೂರಿಗೆ 28 ಜನ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ರಾಯಲ್ ಟ್ರಾವೆಲ್ಸ್ ಬಸ್ ಚಾಲಕ ಮುಂದೆ ಹೋಗುತ್ತಿದ್ದ ಬತ್ತದ ಲೋಡ್ ತುಂಬಿರುವ ಲಾರಿಯ ಹಿಂಬದಿಗೆ ಡಿಕ್ಕಿ ಹೊಡಿಸಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಹಿಂದೆ ಬರುತಿದ್ದ ವಿಆರ್ ಎಲ್ ಖಾಸಗಿ ಬಸ್ಸು ರಾಯಲ್ ಬಸ್ ನ ಬಲಭಾಗದ ಮೂಲೆಗೆ ಡಿಕ್ಕಿ ಹೊಡೆದ ಸರಣಿ ಅಪಘಾತದಲ್ಲಿ ರಾಯಲ್ ಟ್ರಾವಲ್ಸ್ ನ ಬಿಜಾಪುರ ಜಿಲ್ಲೆಯ ಸಿದ್ದಪ್ಪ, ಜ್ಯೋತಿ, ಸುಶ್ಮಿತಾ, ದೀಪಕ್, ಜಕ್ಕಪ್ಪ, ನಾಗರಾಜ, ಸರಳ ಹಾಗೂ ಚಾಲಕ ಮಲ್ಲಪ್ಪ ಎಂಬುವರು ಸೇರಿದಂತೆ 8ಜನರಿಗೆ ಗಾಯವಾಗಿದ್ದು ತಕ್ಷಣ ಅವರನ್ನು ಕೂಡ್ಲಿಗಿ ಆಸ್ಪತ್ರೆಗೆ ಹೈವೇ ಪೆಟ್ರೋಲಿಂಗ್ ಮತ್ತು ಕೂಡ್ಲಿಗಿ 108ಅಂಬ್ಯುಲೆನ್ಸ್ ನಲ್ಲಿ ಕರೆತಂದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.