ಬಳ್ಳಾರಿ:ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಬಹುದಾದ ಹಾಗೂ ವ್ಯಾಜ್ಯ ಪೂರ್ವ ದಾವಾ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಗೊಳಿಸುವ ಬೃಹತ್ ಮೆಗಾ ಇ-ಲೋಕ ಅದಾಲತ್ ಶನಿವಾರ ನಡೆಯಿತು.
ಕೋವಿಡ್‍ನ ಈ ಕಾಲಘಟ್ಟದಲ್ಲಿ ನಡೆಯುತ್ತಿರುವ 2ನೇ ಬೃಹತ್ ಮೆಗಾ ಇ-ಲೋಕ ಅದಾಲತ್ ಇದಾಗಿದೆ.
ಈ ಮೆಗಾ ಅದಾಲತ್ ಕಾರ್ಯಕ್ರಮದಲ್ಲಿ ಬ್ಯಾಂಕ್ ರಿಕವರಿ, ಕಾರ್ಮಿಕ ವಿವಾದಗಳು, ಎಲೆಕ್ಟ್ರೀಸಿಟಿ ಮತ್ತು ಕುಡಿಯುವ ನೀರಿನ, ವೈವಾಹಿಕ, ಕಂದಾಯ ಪ್ರಕರಣಗಳು, ಭೂಮಿ ವಿವಾದ,ಮೋಟಾರ್ ಅಪಘಾತ, ಚೆಕ್‍ಬೌನ್ಸ್,ರಾಜಿಯಾಗಬಹುದಾದ ಐಪಿಸಿ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು ಸೇರಿದಂತೆ ವಿವಿಧ ರೀತಿಯ ರಾಜಿಯಾಗಬಹುದಾದ 10358 ಪ್ರಕರಣಗಳು ಅದಾಲತ್‍ಗೆ ನೋಂದಣಿಯಾಗಿದ್ದವು.
ಜಿಲ್ಲಾ ನ್ಯಾಯಾಲಯದ ಪ್ರವೇಶದ್ವಾರದಲ್ಲಿ ನಾಲ್ಕು ಕಡೆ ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆದು ವ್ಯಾಜ್ಯಗಳ ರಾಜಿಗೆ ಆಗಮಿಸಿದ್ದ ಕಕ್ಷಿದಾರರಿಗೆ ಆರ್‍ಟಿಪಿಸಿಆರ್ ಮೂಲಕ ತಪಾಸಣೆ ನಡೆಸಿ 15 ನಿಮಿಷಗಳಲ್ಲಿ ವರದಿ ಬರುವ ವ್ಯವಸ್ಥೆ ಮಾಡಲಾಗಿತ್ತು. ವರದಿಯ ಪ್ರಮಾಣಪತ್ರ ಪಡೆದುಕೊಂಡ ನಂತರ ಕಕ್ಷಿದಾರರಿಗೆ ಆಯಾ ಸಂಬಂಧಿಸಿದ ಪೀಠಗಳ ಎದುರಿಗೆ ಕಳುಹಿಸಿಕೊಡಲಾಯಿತು.
ಜಿಲ್ಲೆಯಾದ್ಯಂತ ಜಿಲ್ಲಾ ನ್ಯಾಯಾಲಯದ, ತಾಲೂಕು ನ್ಯಾಯಾಲಯ ಸೇರಿದಂತೆ 28 ಪೀಠಗಳಲ್ಲಿ ಈ ಲೋಕ ಅದಾಲತ್‍ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವ್ಯವಸ್ಥೆ ಮಾಡಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಮಲ್ಲೂರು ತಿಳಿಸಿದರು.
ಈ ಲೋಕಅದಾಲತ್‍ನಲ್ಲಿ ಇಬ್ಬರ ಒಪ್ಪಿಗೆಯಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದ ತೀರ್ಮಾನವಾಗುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರ ನಿಮಗೆ ತೃಪ್ತಿಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ಅವರು ತಿಳಿಸಿದರು.
ಈ ಅದಾಲತ್‍ನಲ್ಲಿ ಕಕ್ಷಿದಾರರು ಕೆಲವರು ವಕೀಲರ ಮುಖಾಂತರ ಹಾಗೂ ಇನ್ನೂ ಕೆಲವರು ತಾವೇ ನೇರವಾಗಿ ಭಾಗವಹಿಸಿ ರಾಜಿ ಮಾಡಿಕೊಂಡಿದ್ದಿದು ಕಂಡುಬಂದಿತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪುಷ್ಪಾಂಜಲಿದೇವಿ,ನ್ಯಾಯಾಧೀಶರಾದ ಕಾಸಿಂಚೂರಿಖಾನ್ ಸೇರಿದಂತೆ ಇನ್ನಿತರ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕ ಈರೇಶ ಅಂಗಡಿ ಮತ್ತಿತರರು ಇದ್ದರು.
—