ಶಾಸಕ ಸೋಮಶೇಖರ್ ರೆಡ್ಡಿ ಭರವಸೆ: ಬಳ್ಳಾರಿ ಒಳಚರಂಡಿ ಕಾರ್ಮಿಕರ ಧರಣಿ ಅಂತ್ಯ

ಬಳ್ಳಾರಿ: ಒಳಚರಂಡಿ ಕಾರ್ಮಿಕರು‌ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಐದು ದಿನಗಳಿಂದ ಮಹಾನಗರ ಪಾಲಿಕೆ‌ ಎದುರು ನಡೆಸುತ್ತಿದ್ದ ಪ್ರತಿಭಟನೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರ ಮಧ್ಯಪ್ರವೇಶ ಹಾಗೂ ಭರವಸೆಯಿಂದ ಧರಣಿ ಶನಿವಾರ ಅಂತ್ಯವಾಗಿದೆ.
ಒಳಚರಂಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಕೆಗೆ ಸಂಬಂಧಿಸಿದಂತೆ ಸಕರಾತ್ಮಕವಾಗಿ ಸ್ಪಂದಿಸಲಾಗಿದ್ದು,ಬೇಡಿಕೆಗಳು‌ ಮತ್ತು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದಾಗಿ ತಿಳಿಸಿದ್ದರಿಂದ ಧರಣಿ ಅಂತ್ಯಗೊಳಿಸಿದ್ದಾರೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಅವರು ತಿಳಿಸಿದ್ದಾರೆ.
ಒಳಚರಂಡಿ ಕಾರ್ಮಿಕರನ್ನು ಕಾಯಂಗೊಳಿಸಬೇಕು.ಗುತ್ತಿಗೆ ಪದ್ಧತಿ ರದ್ದು ಪಡಿಸಬೇಕು. ಸಮಾನಕೆಲಸಕ್ಕೆ ಸಮಾನವೇತನವನ್ನು ನೀಡಬೇಕು.ಬೆಳಗಿನ ಉಪಹಾರ ಭತ್ಯೆ ನೀಡಬೇಕು. ಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು.ಮಹಾನಗರ ಪಾಲಿಕೆ ವತಿಯಿಂದ ಗುರುತಿನ ಚೀಟಿಗಳು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ಬಳ್ಳಾರಿ ಒಳಚರಂಡಿ ಕಾರ್ಮಿಕರ ಸಂಘದವರು ಕಳೆದ 5 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ನಗರದ ಜನತೆಗೆ ತುಂಬಾ ತೊಂದರೆ ಆಗುತ್ತಿರುವುದು ಶಾಸಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಶನಿವಾರ ಒಳಚರಂಡಿ ಕಾರ್ಮಿಕರನ್ನು ಹಾಗೂ ಅಧಿಕಾರಿಗಳನ್ನು ಕರೆಸಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು.
ಪಾಲಿಕೆ ಮಟ್ಟದಲ್ಲಿ ಬಗೆಹರಿಸಬಹುದಾದ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ,ಬೆಳಗಿನ ಉಪಹಾರ‌,ಕಾರ್ಮಿಕರಿಗೆ ಹೆಲ್ತ್ ಕಾರ್ಡ್,ಒಳಚರಂಡಿ ಕಾರ್ಮಿಕರಿಗೆ ಪಾಲಿಕೆಯ ಗುರುತಿಸಿ ಚೀಟಿ,ವೇತನ ತಾರತಮ್ಯವನ್ನು ಬಗೆಹರಿಸುವ ಬಗ್ಗೆ,ಕಾರ್ಮಿಕರ ಸಂಖ್ಯೆ ಹೆಚ್ಚಳ ಬೇಡಿಕೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.
ಇನ್ನುಳಿದ ಕೆಲವು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಸೋಮಶೇಖರ್ ರೆಡ್ಡಿ ಅವರು ಕಾರ್ಮಿಕರಿಗೆ ತಿಳಿಸಿದರು.
ಆರೋಗ್ಯ ತಪಾಸಣೆಯನ್ನು ಶಾಸಕರು ತಮ್ಮ ನೇತೃತ್ವದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಕ್ಕೆ ಒಳಚರಂಡಿ ಕಾರ್ಮಿಕರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ಹನುಮಂತಪ್ಪ, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಮಲ್ಲನಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಮುಂಡರಗಿ ನಾಗರಾಜ್, ದಲಿತ ಮುಖಂಡರಾದ ಈಶ್ವರ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಒಳಚರಂಡಿ ಕಾರ್ಮಿಕರು ಉಪಸ್ಥಿತರಿದ್ದರು.