ಗ್ರಾಪಂ ಚುನಾವಣೆ: ಮಣ್ಣೂರು ಗ್ರಾಮದಲ್ಲಿ ಮಾಜಿ ಶಾಸಕ ಬಿ ಎಂ‌ ನಾಗರಾಜ್ ಮತಯಾಚನೆ

ಕುರುಗೋಡು: ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಬಿ ಎಂ ನಾಗರಾಜ್ ಅವರು ಮಣ್ಣೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರ ಜತೆ ಮಾತನಾಡಿದ ಅವರು, ಸಿರುಗುಪ್ಪ ವಿಧಾನ‌ಸಭಾ ಕ್ಷೇತ್ರದ ಎಲ್ಲಾ 26 ಗ್ರಾಪಂಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಜಯಶೀಲರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಸೋಮಲಿಂಗಪ್ಪ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಮೂರು ಬಾರಿ ಜನತೆ ಆಶೀರ್ವಾದ ಮಾಡಿದ್ದರೂ ಹೇಳಿ‌ಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ಮಾಡಿದ್ದರೆ ಸಾಬೀತು ಪಡಿಸಲಿ. ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕರು ಹಾಲಿ ಶಾಸಕರಿಗೆ ಸವಾಲು ಹಾಕಿದರು. , ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೆ ಯಶಸ್ಸು ಕಾಣುತ್ತಿದೆ ಎಂದರೆ ಇದಕ್ಕೆ ಕಾಂಗ್ರೆಸ್ ಸರಕಾರ ಕಾರಣ ಎಂದರು.
ಬಿಜೆಪಿ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡುವಂತಹ ಘಟನೆಗಳೇ ಜರುಗಿವೆ ಎಂದು ದೂರಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತಕ್ಕೋಸ್ಕರ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
2008 ರಲ್ಲಿ ಹಿರಿಯ ಮುತ್ಸದ್ಧಿ ಶಂಕರ ರೆಡ್ಡಿ ಅವರು ನನ್ನನ್ನು ರಾಜಕೀಯಕ್ಕೆ ಕರೆತಂದರು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷ ದ ನಿಷ್ಟಾವಂತ ಕಾರ್ಯಕರ್ತನಾಗಿ ಹಾಗೂ ಜನರ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಣ್ಣ ಪುಟ್ಟ ತಪ್ಪುಗಳು ನಡೆದು ತಮಗೆ ಸ್ಪರ್ಧೆ ಮಾಡಲು ಅವಕಾಶ ಸಿಗಲಿಲ್ಲ ಆದರೆ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಹೈಕಮಾಂಡ್ ತಮಗೆ ಮಣೆಹಾಕುವ ವಿಶ್ವಾಸ ಇದೆ.
ಆದರೂ ಪಕ್ಷದ ನಿಯಮಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳಾದ ಕೋಟೆಹಾಳ್ ಈರಮ್ಮ, ಗಡಿಗಲ್ ಭೀಮಮ್ಮ, ಎನ್. ಬಸವರಾಜ್, ಎಚ್. ಬಸವ, ನೀಲಮ್ಮ, ಛಲವಾದಿ ಮುತ್ತಮ್ಮ, ತಾಪಂ ಸದಸ್ಯ ಸಣ್ಣ ಕರಿಯಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ಗಡಿಗಲ್ ಕರಿಯಪ್ಪ, ಗೇಣಿಕೆಹಾಳ್ ಹನುಮಂತ, ಟಿ. ಅಂಜಿನಪ್ಪ, ತಿರುಪತಿ, ಮಾರೆಣ್ಣ, ಬೈರಿ ಗಂಗಯ್ಯ, ಮಳೆ ಈರಣ್ಣ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.