ಬಳ್ಳಾರಿ ಜಿಲ್ಲೆ ಗ್ರಾಪಂ ಮೊದಲ ಹಂತದ ಚುನಾವಣೆ: ಇಂದು (ಡಿ.22)ಮತದಾನ 1372 ಸ್ಥಾನಗಳಿಗೆ 701 ಮತಗಟ್ಟೆಗಳಲ್ಲಿ ಚುನಾವಣೆ: 3288 ಅಭ್ಯರ್ಥಿಗಳು ಕಣದಲ್ಲಿ

ಬಳ್ಳಾರಿ: ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆಯು 5 ತಾಲೂಕುಗಳ 85 ಗ್ರಾಪಂಗಳ 701 ಮತಗಟ್ಟೆಗಳಲ್ಲಿ ಡಿ.22ರಂದು(ಮಂಗಳವಾರ)ಚುನಾವಣೆ ನಡೆಯಲಿದ್ದು,ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
331ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು,ಇನ್ನೂ 1372 ಸ್ಥಾನಗಳಿಗೆ 3288 ಜನರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಜಿಲ್ಲೆಯ ಬಳ್ಳಾರಿ,ಕುರುಗೋಡು,ಸಿರಗುಪ್ಪ,ಹೊಸಪೇಟೆ, ಕಂಪ್ಲಿ ತಾಲೂಕಿನಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಬಳ್ಳಾರಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾವಣೆಯ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯುವ ನಗರದ ಕೋಟೆ ಆವರಣದ ಸಂತ್‍ಜಾನ್ ಶಾಲೆಯ ಆವರಣದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಸೋಮವಾರ ಬೆಳಗ್ಗೆಯಿಂದಲೇ ಉಪಸ್ಥಿತರಿದ್ದು, ಚುನಾವಣಾ ಸಂಬಂಧಿತ ಅಗತ್ಯ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಹಾಗೂ ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ತಮಗೆ ಸೂಚಿಸಲಾದ ಗ್ರಾಮಗಳ ಮತಗಟ್ಟೆಗಳಿಗೆ ಬಸ್‍ಗಳಲ್ಲಿ ತೆರಳುತ್ತಿರುವ ದೃಶ್ಯ ಕಂಡುಬಂದಿತು.
ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನಿಯೋಜಿತರಾಗಿ ಆಗಮಿಸಿರುವ ಕೆ.ಎಂ.ಸುರೇಶಕುಮಾರ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ರೆಹಮಾನ್ ಪಾಶಾ ಸೇರಿದಂತೆ ಅನೇಕ ಅಧಿಕಾರಿಗಳು ಮಸ್ಟರಿಂಗ್ ಕಾರ್ಯದ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ಸ್ಥಳದಲ್ಲಿದ್ದ ಸಿಬ್ಬಂದಿಗೆ ನೀಡಿದರು.
ಬಳ್ಳಾರಿ ತಾಲೂಕಿನ 25 ಗ್ರಾಪಂಗಳ 261ಮತಗಟ್ಟೆಗಳ ಪೈಕಿ 240 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 73 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು,449 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು,1098 ಜನರು ಕಣದಲ್ಲಿದ್ದು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ತಾಲೂಕಿನಲ್ಲಿ 21 ಅವಿರೋಧ/ಬಹಿಷ್ಕರಿಸಿದ ಮತಗಟ್ಟೆಗಳಿವೆ.
ಕುರುಗೋಡು ತಾಲೂಕಿನಲ್ಲಿ 12 ಗ್ರಾಪಂಗಳ ಪೈಕಿ 11 ಗ್ರಾಪಂಗಳಲ್ಲಿ ಚುನಾವಣೆ ನಡೆಯಲಿದ್ದು, 113 ಮತಗಟ್ಟೆಗಳ ಪೈಕಿ 81 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅವಿರೋಧ/ಬಹಿಷ್ಕರಿಸಿದ ಕಾರಣ 32 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿಲ್ಲ. 68 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, 145 ಸದಸ್ಯ ಸ್ಥಾನಗಳಿಗೆ 337 ಅಭ್ಯರ್ಥಿಗಳು ಕಣದಲ್ಲಿ ತೀವ್ರ ಪೈಪೋಟಿ ನಡೆಸಿದ್ದಾರೆ.
ಸಿರಗುಪ್ಪ ತಾಲೂಕಿನ 27 ಗ್ರಾಪಂಗಳ ಪೈಕಿ 26 ಗ್ರಾಮಗಳ 173 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.ಇನ್ನೂ 46 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ.ಈಗಾಗಲೇ 94 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 361 ಸದಸ್ಯ ಸ್ಥಾನಗಳಿಗೆ 763 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಹೊಸಪೇಟೆ ತಾಲೂಕಿನ 13 ಗ್ರಾಪಂಗಳ 125 ಮತಗಟ್ಟೆಗಳ ಪೈಕಿ 114 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.ಇನ್ನೂ 11 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ.ಈಗಾಗಲೇ 41 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 233 ಸದಸ್ಯ ಸ್ಥಾನಗಳಿಗೆ 653 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಕಂಪ್ಲಿ ತಾಲೂಕಿನ 10 ಗ್ರಾಪಂಗಳ 100 ಮತಗಟ್ಟೆಗಳ ಪೈಕಿ 93 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ಇನ್ನೂ 07 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ. 29 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂಳಿದ 184 ಸದಸ್ಯ ಸ್ಥಾನಗಳಿಗೆ 437 ಅಭ್ಯರ್ಥಿಗಳು ತೀವ್ರ ಪೈಪೋಟಿಗಿಳಿದಿದ್ದು,ಮತದಾರ ಯಾರಿಗೆ ಮಣೆಹಾಕುತ್ತಾನೋ ಕಾದುನೋಡಬೇಕಿದೆ.
ಬಳ್ಳಾರಿ ಜಿಲ್ಲೆಯ 5 ತಾಲೂಕುಗಳ 87 ಗ್ರಾಪಂಗಳ ಪೈಕಿ 85 ಗ್ರಾಪಂಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 818 ಮತಗಟ್ಟೆಗಳ ಪೈಕಿ 117 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಮೊದಲ ಹಂತದ ಚುನಾವಣಾ ಪ್ರಕ್ರಿಯೆಗಾಗಿ 3600 ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಜಿಲ್ಲಾಡಳಿತ ನಿಯುಕ್ತಿಗೊಳಿಸಿದೆ.
*****