ಏನಿದು ಗ್ರಾಮಪಂಚಾಯಿತಿ ಚುನಾವಣೆ? ಒಂದು ಸಂಕ್ಷಿಪ್ತ ಇತಿಹಾಸ -ಶ್ರೀಮತಿ ಸುಜಾತಾ ಮಾಕಲ್

ಯಾವುದೇ ಚುನಾವಣೆ ಇರಲಿ ಮತದಾನವೇ ಅದರ ಮುಖ್ಯ ಜೀವಾಳ. ಅದೇ ರೀತಿ ಪ್ರತಿನಿಧಿತ್ವ(ಜನರ ಪರವಾಗಿ, ಜನರಿಗಾಗಿ ಅವರ ಪ್ರತಿನಿಧಿಗಳು ಆಡಳಿತ ನಡೆಸುವುದು) ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಂತ ಯಾವುದನ್ನು ಕರೆಯುತ್ತೇವೋ, ಅದಕ್ಕೆ ಚುನಾವಣೆ ಜೀವಾಳ.
ಈಗ ನಮ್ಮ ರಾಜ್ಯದಲ್ಲಿ ಮೊದಲ‌ಹಂತದ ಗ್ರಾಮಪಂಚಾಯತಿ ಚುನಾವಣೆ ಶಾಂತಿಯುತವಾಗಿ ಮುಗಿದಿದೆ. ಇನ್ನು ಕೆಲ ದಿನಗಳಲ್ಲೇ ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾನದ ಪ್ರಾಮುಖ್ಯತೆ ಎಷ್ಟಿದೆ ಅನ್ನುವುದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಇತಿಹಾಸ:
ನೇತ್ರದಾನ, ರಕ್ತದಾನ ಹಾಗೂ ದೇಹದಾನ ಎಷ್ಟು ಪವಿತ್ರವಾದವುಗಳೊ ಅಷ್ಟೆ ಮತದಾನ ಕೂಡ ಪವಿತ್ರವಾದುದು ಅನ್ನೋದನ್ನ ಹಿರಿಯರು/ತಿಳಿದವರು ಹೇಳಿರುವುದನ್ನು ಕೇಳಿದ್ದೇವೆ. ಈ ಮೇಲಿನ ದಾನಗಳು ಇನ್ನೊಬ್ಬರಿಗೆ ಜೀವನ/ಆಸರೆ ಕೊಟ್ಟರೆ, ಮತದಾನ ನಮಗೆ ನಾವೇ ಅಥವಾ ನಮ್ಮ ಸಮಾಜಕ್ಕೆ ನಾವು ಕೊಡುವ ಕೊಡುಗೆಯಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ನಮಗಾಗಿ ಇರುವ ಆಧುನಿಕ ಆಡಳಿತ ವ್ಯವಸ್ಥೆಯಾಗಿದ್ದರೂ, ಗ್ರಾಮಪಂಚಾಯಿತಿ ವ್ಯವಸ್ಥೆ ಅಥವಾ ಪರಿಕಲ್ಪನೆ ಬಹಳ ಹಿಂದಿನದು. ನಮ್ಮ ಇತಿಹಾಸ ಮತ್ತು ವೇದಶಾಸ್ತ್ರಗಳನ್ನು ಓದಿದಾಗ ಗ್ರಾಮಾಡಳಿತ ವ್ಯವಸ್ಥೆ ಪುರಾತನ ಕಾಲದಿಂದಲೂ ಇರುವುದು ಅರಿವಾಗುತ್ತದೆ.

ಆಗಿನ ಕಾಲದಲ್ಲಿ ಗ್ರಾಮಾಡಳಿತ ಅಥವಾ ಗ್ರಾಮ ಪಂಚಾಯಿತಿ ಸ್ವಯಂ ಪರಿಪೂರ್ಣ ಸ್ಥಳೀಯ ಆಡಳಿತ ವ್ಯವಸ್ಥೆಯಾಗಿದ್ದವು ಮತ್ತು ಸಾಕಷ್ಟು ಸ್ವತಂತ್ರವಾಗಿದ್ದವು. ಗ್ರಾಮದ ಆಗು-ಹೋಗುಗಳು, ಹಬ್ಬ-ಹರಿದಿನ-ಜಾತ್ರೆ, ಜನರ ಕಷ್ಟ-ನಷ್ಟ-ತಗಾದೆಗಳನ್ನು ನೋಡಿಕೊಳ್ಳಲು ಗ್ರಾಮದ ಜನರೆಲ್ಲಾ ಸೇರಿ ತಮ್ಮವರಲ್ಲೇ ಇರುವ ಹೆಚ್ಚು ಅನುಭವಸ್ಥ, ಬುದ್ದಿವಂತ, ನಿಸ್ವಾರ್ಥ ಮತ್ತು ಸಚ್ಚ್ಯಾರಿತ್ರ್ಯ ಹೊಂದಿರುವ ಐದು ಜನ(ಪಂಚರು) ವ್ಯಕ್ತಿಗಳನ್ನು ಗ್ರಾಮಾಡಳಿತದ ಮುಖ್ಯಸ್ಥರನ್ನಾಗಿ ನೇಮಕ/ಆಯ್ಕೆ ಮಾಡುತ್ತಿದ್ದರು. ಈ ಪಂಚರು ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಗೌರವ ತೋರುವ ಜೊತೆಗೆ ಕರ್ತವ್ಯ ನಿಷ್ಠೆಯಿಂದಿದ್ದು, ನ್ಯಾಯ ಹಾಗೂ ನಿಷ್ಠುರತೆಯಿಂದ ನಡೆದುಕೊಂಡು ಗ್ರಾಮಾಡಳಿತ ವ್ಯವಸ್ಥೆಯ ಪಾಲನೆ ಮಾಡುತ್ತಿದ್ದರು. ನ್ಯಾಯದಾನ ಮಾಡುವುದು, ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು, ವಿವಿಧ ಕಲ್ಯಾಣ ಕಾರ್ಯಗಳನ್ನು ಕೈಗೊಳ್ಳುವುದು, ಅದಕ್ಕಾಗಿ ಸಮಿತಿಗಳನ್ನು ರಚಿಸುವುದು ಮುಂತಾದ ಎಲ್ಲಾ ಕಾರ್ಯಗಳನ್ನು ಮಾಡುವುದರ ಮೂಲಕ ಗ್ರಾಮದಲ್ಲಿ ಸೌಹಾರ್ದತೆಯ ವಾತಾವರಣ ಇರುವಂತೆ ನೋಡಿಕೊಳ್ಳುತ್ತಿದ್ದರು. ಈ ಎಲ್ಲಾ ಕಾರಣಕ್ಕೆ ಪಂಚರ ಸ್ಥಾನಮಾನ ಗೌರವಾನ್ವಿತ ಎನಿಸಿಕೊಂಡಿತ್ತು.

ಹೊರಗಿನವರ(ಬೇರೆ ಊರಿನವರು/ಗ್ರಾಮಕ್ಕೆ ಸಂಬಂಧಪಡದವರು) ಹಸ್ತಕ್ಷೇಪ ಮಾಡಲು ಈ ವ್ಯವಸ್ಥೆಯಲ್ಲಿ ಅವಕಾಶವಿರಲಿಲ್ಲ. ಸ್ವಯಂ ಆಡಳಿತ ವ್ಯವಸ್ಥೆಯಾಗಿದ್ದ ಇವು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಸಾಕ್ಷಿಯಂತಿದ್ದವು. ಇದೇ ವ್ಯವಸ್ಥೆಯನ್ನೇ ನಾವು ವೇದಗಳು, ರಾಮಾಯಣ, ಮಹಾಭಾರತ, ಕೌಟಿಲ್ಯನ ಅರ್ಥಶಾಸ್ತ್ರ, ಶುಕ್ರನೀತಿಸಾರ, ಪುರಾಣ, ಜಾತಕ ಕಥೆಗಳಲ್ಲಿ ಹೇಳಿರುವುದನ್ನು ಓದಿನಿಂದ ತಿಳಿಯಬಹುದು. ಅದೇ ರೀತಿ ಗ್ರೀಕ್ ರಾಯಭಾರಿ ಮೆಗಾಸ್ತನೀಸ್, ಚೀನಾ ಪ್ರವಾಸಿಗರಾದ ಹುಯನತ್ಸಾಂಗ್ ಹಾಗೂ ಫಾಯಿಯಾನರ ಗ್ರಾಮಸಭೆಗಳು ಅಥವಾ ಪಂಚಾಯಿತಿಗಳ ಬಗ್ಗೆ ವರ್ಣನೆ ಮಾಡಿರುವುದನ್ನು ಇತಿಹಾಸದಿಂದ ತಿಳಿಯಬಹುದು.

ಸ್ವಯಂ ಪರಿಪೂರ್ಣತೆ ಗ್ರಾಮ ವ್ಯವಸ್ಥೆಯ ಅವನತಿಗೆ ಕಾರಣಗಳು: ಮೌರ್ಯರು, ಗುಪ್ತರು ಮತ್ತು ಚೋಳರ ಕಾಲದಲ್ಲಿ ಗ್ರಿಮಾಡಳಿತಕ್ಕೆ ಯಾವುದೇ ಧಕ್ಕೆಯಾಗಲಿಲ್ಲ.13 ನೇ ಶತಮಾನದವರೆಗೆ ವ್ಯವಸ್ಥಿತವಾಗಿದ್ದ ಪಂಚಾಯಿತಿ ವ್ಯವಸ್ಥೆಯು ಮುಸ್ಲಿಂ ದಾಳಿ ಮತ್ತು ಆಳ್ವಿಕೆಯಿಂದಾಗಿ ಕ್ರಮೇಣ ತಮ್ಮ ಮಹತ್ವ ಕಳೆದುಕೊಂಡವು. ಬ್ರಿಟಿಷರ ಬ್ರಿಟನ್ ಮಾದರಿಯ ಕೇಂದ್ರಿಕೃತ ಆಳ್ವಿಕೆಯು ಸ್ಥಳೀಯರ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥವಾಗಿತ್ತು‌. ಸ್ಥಳೀಯತೆಗೆ ಪ್ರಾಧಾನ್ಯತೆ ಕೊಡದೇ ಬ್ರಿಟಿಷರು ತಮ್ಮ ಆಳ್ವಿಕೆ ಮತ್ತು ಆಡಳಿತ ವ್ಯವಸ್ಥೆ/ಪದ್ಧತಿಯನ್ನು ನಮ್ಮ ಮೇಲೆ ಹೇರಿದ್ದರಿಂದ ಕ್ರಮೇಣ, ಹಂತಹಂತವಾಗಿ ಹಳೆಯ ಮಾದರಿಯ ಪಂಚಾಯಿತಿ ವ್ಯವಸ್ಥೆ ತನ್ನ ಮಹತ್ವ ಕಳೆದುಕೊಳ್ಳತೊಡಗಿತು.

ಪಂಚಾಯಿತಿಗಳ ಪುನರುಜ್ಜೀವನ:
ಬ್ರಿಟಿಷರ ಆಡಳಿತ ಕುಸಿತಕ್ಕೆ ಪಂಚಾಯಿತಿಗಳನ್ನು ನಿರ್ಲಕ್ಷಿಸುದ್ದೇ ಕಾರಣ ಎಂದು ಅರಿತು ಮತ್ತೆ ಅವುಗಳ ಸ್ಥಾಪನೆಗೆ ಯೋಚಿಸಿದವರು ಲಾರ್ಡ್ ರಿಪ್ಪನ್ ಎಂಬ ಬ್ರಿಟಿಷ್ ಅಧಿಕಾರಿ. ಆತನಿಂದಾಗಿಯೇ ಭಾರತದಲ್ಲಿ ಪಂಚಾಯಿತಿಗಳು ಮರುಜೀವ ಪಡೆದವು. 1882ರಲ್ಲಿ ಒಂದು ಪ್ರಸಿದ್ಧ ಗೊತ್ತುವಳಿ ಮಂಡಿಸಿ ಸ್ಥಳೀಯ ಸ್ವಯಂ ಸಂಸ್ಥೆಗಳು ಮರುಚೇತರಿಕೆಗೆ ಈತ ಕಾರಣನಾದ.

ಸ್ವಾತಂತ್ರ್ಯದ ನಂತರದ ಬೆಳವಣಿಗೆಗಳು:
ಸ್ವಾತಂತ್ರ್ಯದ ನಂತರ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಗೆ ಪೂರಕವಾಗುವಂತೆ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಪಂಚಾಯಿತಿಗಳನ್ನು ಸ್ಥಾಪಿಸಬೇಕೆಂದು ಸಂವಿಧಾನದಲ್ಲಿ ತಿಳಿಸಲಾಗಿದೆ.

ಬಲವಂತರಾಯ ಮೆಹ್ತಾ ಸಮಿತಿ: ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಸಲಹೆ ನೀಡಲು 1957ರಲ್ಲಿ ಈ ಸಮಿತಿ ರಚಿಸಲಾಯಿತು. ಈ ಸಮಿತಿಯ ಸಲಹೆಯಂತೆ 1959ರಲ್ಲಿ ಕರ್ನಾಟಕದಲ್ಲಿ 3 ಹಂತದ ಪಂಚಾಯಿತಿ ಸಂಸ್ಥೆಗಳು ಸ್ಥಾಪನೆಯಾದವು(ಗ್ರಾಮ, ತಾಲೂಕು ಮತ್ತು ಜಿಲ್ಲೆ).

ಅಶೋಕ್ ಮೆಹ್ತಾ ಸಮಿತಿ: ನಂತರ 1978ರಲ್ಲಿ ಈ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಲು ಈ ಸಮಿತಿ ರಚಿಸಲಾಯಿತು. ಈ ಸಮಿತಿ 2 ಹಂತಗಳ ಪಂಚಾಯಿತ್ ರಾಜ್ ಸ್ಥಾಪನೆಗೆ ಸಲಹೆ ನೀಡಿತು. ಇದರಂತೆ 1989ರಲ್ಲಿ ಕರ್ನಾಟಕದಲ್ಲಿ ಈ ಸಲಹೆಗಳನ್ನು ಜಾರಿಗೊಳಿಸಲಾಯಿತು.

ನಂತರದ ಸಮಿತಿಗಳು: ಜಿ.ವಿ.ಕೆ. ರಾವ್ ಸಮಿತಿ, 1985ರಲ್ಲಿ ಮತ್ತು 1986ರಲ್ಲಿ ಎಲ್. ಎಂ. ಸಿಂಘ್ವಿ  ಸಮಿತಿಗಳು ರಚನೆಯಾಗಿ ತಮ್ಮ ಸಲಹೆಗಳನ್ನು ನೀಡಿ ಪಂಚಾಯಿತಿ ವ್ಯವಸ್ಥೆ ಮರುಚೇತರಿಕೆಗಾಗಿ ಪ್ರಯತ್ನಿಸಿದವು. ಅದೇ ರೀತಿ
ಸಂವಿಧಾನದಲ್ಲಿ 73ನೆ ತಿದ್ದುಪಡಿ ಮಾಡಿ(1993ರಲ್ಲಿ) ಪಂಚಾಯತ ರಾಜ್ ವ್ಯವಸ್ಥೆಗೆ ಪ್ರಥಮ ಬಾರಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲಾಯಿತು. ಇದರಂತೆ ಗ್ರಾಮಸಭೆ ಇರುವ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳನ್ನು ಸ್ಥಾಪಿಸಲಾಗಿದೆ.

ಮತದಾನದ ಮಹತ್ವ: ಇಷ್ಟೆಲ್ಲಾ  ತೊಂದರೆಗಳನ್ನು ದಾಟಿಕೊಂಡು ಬಂದಿರುವ ಈ ವ್ಯವಸ್ಥೆ ಗಟ್ಟಿಯಾಗಬೇಕಾದರೆ, ಗ್ರಾಮ ಸ್ವರಾಜ್ಯ ಸ್ಥಾಪನೆಯಾಗಬೇಕಾದರೆ, ಪ್ರಜೆಗಳು ತಮ್ಮ ಮತವನ್ನು ಸ್ವಚ್ಛ ಮನಸ್ಸಿನಿಂದ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಚಲಾಯಿಸಬೇಕು. ಈ ಜವಾಬ್ದಾರಿಯನ್ನು ನಾವೆಲ್ಲಾ ನಿಭಾಯಿಸಿದಾಗಲೇ ಚುನಾವಣೆಗಳು ಸಾರ್ಥಕವೆನಿಸಿಕೊಳ್ಳುತ್ತವೆ, ವ್ಯವಸ್ಥೆ ಸುಸ್ಥಿರವಾಗುತ್ತದೆ.

(ಲೇಖಕಿ ಶ್ರೀಮತಿ ಸುಜಾತಾ ಮಾಕಲ್ ಅವರು ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು)