ಬಳ್ಳಾರಿ: ಜಿಲ್ಲೆಯ ರೈತರು ಹೆಚ್ಚಿನ ತಂತ್ರಜ್ಞಾನ ಬಳಕೆಯ ಜೊತೆಗೆ ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಹೇಳಿದರು.
ತಾಲೂಕಿನ ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆಯಾಗಿದ್ದು, ಜಿಲ್ಲೆಯ ರೈತರು ತಾವು ಬೆಳೆದ ಬೆಳೆಯ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಆ್ಯಪ್ ಮುಖಾಂತರ ನೊಂದಾಯಿಸಬೇಕೆಂದು ಕೋರಿದರು.
ತುಂಗಭದ್ರ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ತುಂಗಭದ್ರ ಅಚ್ಚುಕಟ್ಟಿನ ಪ್ರದೇಶದ ರೈತರು ಏಕ ಬೆಳೆಯನ್ನು ಬೆಳೆಯುವುದನ್ನು ಬಿಟ್ಟು ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು ಎಂದರು.
ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಗುರುಸಿದ್ದಪ್ಪ ಸಂಡೂರು,ರವಿಕುಮಾರ್,ಭರಮನಗೌಡ ಕೂಡ್ಲಿಗಿ, ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಅವರು ಮಾತನಾಡಿ, ರೈತರು ಸ್ವಾವಲಂಬಿಯಾಗಬೇಕು ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು. ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚಿನ ಬೆಳೆಯನ್ನು ಬೆಳೆಯಲು ಹಾಗೂ ಜೀವಾಮೃತ,ಬೀಜಾಮೃತ ತಯಾರಿಸಿ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ರೈತರು ಜಾಗೃತರಾಗಬೇಕು ಕಡಿಮೆ ಖರ್ಚಿನ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಬಳಸಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಯಪ್ರಕಾಶ ಅವರು ರೈತರು ಒಕ್ಕೂಟಗಳನ್ನು ಮಾಡಿಕೊಂಡು ಬೆಳೆಯ ಮೌಲವರ್ಧನೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಈ ಸಮಾರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ 10 ಪ್ರಗತಿಪರ ರೈತರಿಗೆ ಹಾಗೂ ತಾಲ್ಲೂಕು ಮಟ್ಟದಲ್ಲಿ 5 ಪ್ರಗತಿ ಪರ ರೈತರಿಗೆ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಸಿ.ಆರ್. ಚಂದ್ರಶೇಖರ್ ಸ್ವಾಗತಿಸಿದರು. ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜಕ್ಕೆ ರೈತರು ನೀಡುವ ಕೊಡುಗೆಗಳ ಮಹತ್ವ ಮತ್ತು ರೈತರಿಂದ ದೇಶದ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉದೇಶಿಸಿ ನಾಗರೀಕರಲ್ಲಿ ಜಾಗೃತಿ ಮೂಡಿಸಲು ಕಿಸಾನ್ ದಿವಸ್, ರಾಷ್ಟ್ರೀಯ ರೈತರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
*****