ಕಾಲಿನಿಂದಲೇ ಮತದಾನದ ಹಕ್ಕನ್ನು ಚಲಾಯಿಸಿದ ಎರಡು ಕೈಗಳಿಲ್ಲದ ಗುಂಡುಮುಣುಗು ಲಕ್ಷ್ಮಿ!

ಕೂಡ್ಲಿಗಿ: ಎರಡು ಕೈಗಳಿಲ್ಲದಿದ್ದರೇನಂತೆ ನನ್ನ ಮತದಾನದ ಹಕ್ಕನ್ನು ಚಲಾಯಿಸಿಯೇ ತೀರುತ್ತೇನೆಂದು ತನ್ನ ಕಾಲಿನ ಮೂಲಕವೇ ಭಾನುವಾರ ಬೆಳಿಗ್ಗೆ ತಾಲೂಕಿನ ಗುಂಡುಮುಣುಗು ವಿಕಲಚೇತನೆ ಎರಡು ಕೈಗಳಿಲ್ಲದ ಲಕ್ಷ್ಮಿ ಮತ ಹಾಕುವ ಮೂಲಕ ತನ್ನ ಹಕ್ಕನ್ನು ಚಲಾಯಿಸಿ ಮಾದರಿಯಾದರು. ತಾಲೂಕಿನ ಗುಂಡುಮುಣುಗು ಪಂಚಾಯತಿಯ ಮತಗಟ್ಟೆ ಸಂಖ್ಯೆ 47ರಲ್ಲಿ, ತನ್ನ ಕಾಲಿನಿಂದಲೇ ದಾಖಲೆ ಪುಸ್ತಕದಲ್ಲಿ ಸಹಿಮಾಡಿ ಕಾಲಿನ ಬೆರಳಿಗೆ ಶಾಯಿಹಾಕಿಸಿಕೊಂಡು ತನ್ನ ಮತ ಹಕ್ಕು ಚಲಾಯಿಸಿ ಹರ್ಷಿಸಿದರು.
ಕಳೆದ ಸಂಸತ್ ಚುನಾವಣಾ ಸಂದರ್ಭದಲ್ಲಿ ವಿಕಲಚೇತನೆ ಲಕ್ಷ್ಮಿ ಜಿಲ್ಲೆಯ ಮತ ಜಾಗೃತಿ ರಾಯಭಾರಿಯಾಗಿ ಜನರಲ್ಲಿ, ವಿಕಲಚೇತನರಿಗೆ ಮತ ಜಾಗೃತಿ ಮೂಡಿಸಿದ್ದರು.
ಇಂದು ಸಹ ತಮ್ಮ ಹಕ್ಕು ಚಲಾಯಿಸಿ ಇತರರಿಗೂ ಮಾದರಿಯಾದರು ಮಾತ್ರವಲ್ಲ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ತನ್ನ ಕಾಲಿನಿಂದ ಮತ ಮುದ್ರೆ ಒತ್ತಿ ಅಭ್ಯರ್ಥಿಗಳ ಅದೃಷ್ಟವನ್ನೂ ಬರೆದಳು ಲಕ್ಷ್ಮಿ.