ಬಳ್ಳಾರಿ: ಜಿಲ್ಲೆಯಲ್ಲಿ ಎರಡನೆಯ ಹಂತದ ಗ್ರಾಪಂ ಚುನಾವಣೆಯ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ಭಾನುವಾರ ನಡೆಯಿತು.
ಜಿಲ್ಲೆಯ ಸಂಡೂರು,ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ,ಹಡಗಲಿ, ಕೊಟ್ಟೂರು,ಹರಪನಹಳ್ಳಿ 6 ತಾಲೂಕುಗಳ 144 ಗ್ರಾಪಂಗಳ 1150 ಮತಗಟ್ಟೆಗಳಲ್ಲಿ ಮತದಾನ ಅತ್ಯಂತ ಶಾಂತಿಯುತವಾಗಿ ನಡೆದಿದೆ.
ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಮಾಡುವುದಕ್ಕೆ ಜನರು ಅತ್ಯಂತ ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತುಕೊಂಡು ಮತಚಲಾಯಿಸುತ್ತಿರುವುದು ಕಂಡುಬಂದಿತು.
ಬಳ್ಳಾರಿ ಜಿಲ್ಲೆಯಲ್ಲಿ ಮಧ್ಯಾಹ್ನ 3ಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತ ನೀಡಿದ ವರದಿ ಅನುಸಾರ ಶೇ.64.32ರಷ್ಟು ಮತದಾನವಾಗಿದೆ.
ಈಗಾಗಲೇ 319 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಭಾನುವಾರ 2243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆಗಿಳಿದಿದ್ದ 5457 ಅಭ್ಯರ್ಥಿಗಳ ಭವಿಷ್ಯ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.30ರಂದು ಯಾರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ ಎಂಬುದು ಸ್ಪಷ್ಟವಾಗಲಿದೆ.
ಸಂಡೂರು ತಾಲೂಕಿನ 26 ಗ್ರಾಪಂಗಳ 227 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಈ ತಾಲೂಕಿನಲ್ಲಿ 52 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು,442 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1135 ಜನರು ಕಣದಲ್ಲಿದ್ದು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 19 ಗ್ರಾಪಂಗಳ 150 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗಾಗಲೇ 47 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, 291 ಸದಸ್ಯ ಸ್ಥಾನಗಳಿಗೆ 698 ಅಭ್ಯರ್ಥಿಗಳು ಕಣದಲ್ಲಿದ್ದು,ಅದೃಷ್ಟಲಕ್ಷ್ಮೀ ಮತಪೆಟ್ಟಿಗೆಯಲ್ಲಿದ್ದು,ಯಾರಿಗೊಲಿಯಲಿದ್ದಾಳೆ ಕಾದುನೋಡಬೇಕಿದೆ.
ಹಡಗಲಿ ತಾಲೂಕಿನ 26 ಗ್ರಾಪಂಗಳ 204 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗಾಗಲೇ 20 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 408 ಸದಸ್ಯ ಸ್ಥಾನಗಳಿಗೆ 992 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೂಡ್ಲಿಗಿ ತಾಲೂಕಿನ 25 ಗ್ರಾಪಂಗಳ 208 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗಾಗಲೇ 95 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 387 ಸದಸ್ಯ ಸ್ಥಾನಗಳಿಗೆ 895 ಅಭ್ಯರ್ಥಿಗಳು ಕಣದಲ್ಲಿದ್ದು,ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಕೊಟ್ಟೂರು ತಾಲೂಕಿನ 13 ಗ್ರಾಪಂಗಳ 81 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. 29 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂಳಿದ 156 ಸದಸ್ಯ ಸ್ಥಾನಗಳಿಗೆ 368 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರ ಯಾರಿಗೆ ಮಣೆಹಾಕಿದ್ದಾನೋ ಕಾದುನೋಡಬೇಕಿದೆ.
ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಮತಗಟ್ಟೆಗೆ ಮತದಾನ ಮಾಡಲು ಆಗಮಿಸುವ ಪ್ರತಿಯೊಬ್ಬರ ಕೈಗೂ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಿ ಒಳಬಿಡಲಾಗುತ್ತಿತ್ತು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಶಾ ಕಾರ್ಯಕರ್ತೆಯರು ಸೂಚನೆ ನೀಡುತ್ತಿದ್ದರು.