ಕೊಪ್ಪಳ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿ ಭಾನುವಾರ(ಡಿ.27) ಸುಗಮ ಹಾಗೂ ಶಾಂತಯುತ ಮತದಾನ ನಡೆಯಿತು.
ಎರಡನೇ ಹಂತದ ಮತದಾನ ನಡೆಯುವ ನಾಲ್ಕು ತಾಲ್ಲೂಕುಗಳಲ್ಲಿನ 76 ಗ್ರಾಮ ಪಂಚಾಯತಿಯ 645 ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮತದಾನ ಕೇಂದ್ರಕ್ಕೆ ಆಗಮಿಸಿದ ಎಲ್ಲ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿತ್ತು. ಅಲ್ಲದೇ ಕೈಗಳಿಗೆ ಸೈನಿಟೈಸರ್ ಸಿಂಪಡಣೆ ಮಾಡಲಾಯಿತು. ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಹಾಗಾಗಿ ಎಲ್ಲ ಮತದಾರರು ಮಾಸ್ಕ್ ಧರಿಸಿಕೊಂಡು ಮತ ಚಲಾಯಿಸಿದರು.
ಮತದಾನ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಎಲ್ಲ ಮತಕೇಂದ್ರಕ್ಕೂ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸರತಿಸಾಲಿನಲ್ಲಿ ಆಗಮಿಸಿದ ಮಹಿಳೆಯರು, ಪುರುಷರು, ಯುವಕ-ಯುವತಿಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಅಂಗವಿಕಲರು ಹಾಗೂ ಹಿರಿಯ ನಾಗರಿಕರನ್ನು ಜಾಗರೂಕತೆಯಿಂದ ಕರೆತರುವ ದೃಷ್ಟಿಯಿಂದ ವ್ಹೀಲ್ ಛೇರ್ ವ್ಯವಸ್ಥೆ ಮಾಡಲಾಗಿತ್ತು.
ಗಂಗಾವತಿ ತಾಲ್ಲೂಕಿನ ಆನೆಗುಂದಿಯ ಮತಗಟ್ಟೆಗೆ ಗಂಗಾವತಿ ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆನೆಗುಂದಿಯ ವಿಕಲಚೇತನ ವೃದ್ಧೆ ಗಂಗಮ್ಮ ಅವರು ವೀಲ್ ಚೇರ್ ಮೂಲಕ ಬಂದು ಮತದಾನ ಮಾಡಿ, ಇತರ ನಾಗರಿಕರಿಗೆ ಮಾದರಿಯಾದರು. ಗಂಗಾವತಿ ತಾಲ್ಲೂಕಿನ ಆನೆಗುಂದಿಯ 80ರ ಇಳಿ ವಯಸ್ಸಿನ ಜಯಮ್ಮ ಹಾಗೂ ಹೇರೂರಿನ 72 ವಯಸ್ಸಿನ ಸೀತಮ್ಮ ಮತದಾನ ಮಾಡಿದರು.
ಮಾದರಿ ಮತಗಟ್ಟೆ:
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಪಂಚಾಯತಿಯ ಮತಗಟ್ಟೆಯನ್ನು ಮಾದರಿ ಮತಕೇಂದ್ರಗಳನ್ನಾಗಿ ಮಾಡಲಾಗಿತ್ತು. ಈ ಮೂಲಕ ‘ಮತದಾರ ಸ್ನೇಹಿ’ ಆಗಿ ಮಾರ್ಪಾಡು ಮಾಡಲಾಗಿತ್ತು. ಈ ಕೇಂದ್ರದಲ್ಲಿನ ಪ್ರವೇಶ ಧ್ವಾರಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಹಾಗೂ ಉಚಿತ ಮಾಸ್ಕ್ ವಿತರಿಸಲಾಗಿದೆ. ಮತಕೇಂದ್ರದಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಲಾಗಿದೆ. ಆಸನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿದೆ ಎಂದು ಗಂಗಾವತಿ ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್ ತಿಳಿಸಿದರು.