ಕೂಡ್ಲಿಗಿಕೆರೆ ಬಳಿ ಕರಡಿ ದಾಳಿ: ಇಬ್ಬರಿಗೆ ಗಾಯ

ಕೂಡ್ಲಿಗಿ: ಬಹಿರ್ದೆಸೆಗೆ ಹೋಗಿಬರುತ್ತಿದ್ದ ಇಬ್ಬರ ಮೇಲೆ ಕರಡಿಯೊಂದು ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಿಗ್ಗೆ 7-30ರ ಸುಮಾರಿನಲ್ಲಿ ಕೆರೆಕಾವಲರಹಟ್ಟಿಯ ಹೊರವಲಯದ ಕೂಡ್ಲಿಗಿ ಕೆರೆ ಸಮೀಪ ಜರುಗಿದೆ. ಕೆರೆ ಕಾವಲರಹಟ್ಟಿಯ ನಾಗರಾಜ (27) ಹಾಗೂ ಸಂಡೂರಿನ ಎನ್. ವೆಂಕಟೇಶ (52) ಗಸಯಗೊಂಡವರು.
ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ನಾಗರಾಜನನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಾಳು ಮಾಹಿತಿ: ಬೆಳಿಗ್ಗೆ ಕೆರೆಕಾವಲರಹಟ್ಟಿಯ ಹೊರವಲಯದ ಕೂಡ್ಲಿಗಿ ದೊಡ್ಡಕೆರೆ ಕಡೆಗೆ ಬಹಿರ್ದೆಸೆಗೆ ಹೋಗಿ ಬರುತ್ತಿದ್ದ ನಾಗರಾಜನ ಮೇಲೆ ಕರಡಿ ದಾಳಿನಡೆಸಿದೆ. ತಕ್ಷಣ ಬೋರಲಾಗಿ ಮಲಗಿದ್ದರಿಂದ ತಲೆಗೆ ಉಗುರಿನಿಂದ ಪರಚಿ ಗಾಯಗೊಳಿಸಿದೆ. ಅದೇ ಸಮಯಕ್ಕೆ ನಿನ್ನೆ ಆಂಜನೇಯ ಸ್ವಾಮಿ ಕಾರ್ತಿಕಕ್ಕೆ ಸಂಡೂರಿನಿಂದ ಬಂದಿದ್ದ ವೆಂಕಟೇಶನು ಬಹಿರ್ದೆಸೆಗೆ ಹೋಗುತ್ತಿದ್ದ ಆತನ ಮೇಲೆ ಸಹ ದಾಳಿ ನಡೆಸಿದ್ದು ಅದರಿಂದ ತಪ್ಪಿಸಿಕೊಂಡರು ತಲೆಗೆ ಸ್ವಲ್ಪ ಪರಚಿ ಗಾಯಗೊಳಿಸಿದೆ. ತಕ್ಷಣ ಗ್ರಾಮದ ಜನತೆ ಬರುತ್ತಿದ್ದಂತೆ ಕರಡಿ ಕೆರೆಭಾಗದ ಕಡೆಗೆ ಓಡಿಹೋಗಿದೆ ಎಂದು ಗಾಯಾಳು ವೆಂಕಟೇಶ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಪಡೆದುಕೊಂಡಿದ್ದಾರೆ.
*****