(ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮ ದಿನವನ್ನು ನಾಡಿನಾದ್ಯಂತ ಇಂದು(ಡಿ.29) ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಮಹಾಚೇತನ ಕುವೆಂಪು ಅವರ ಜನ್ಮ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತದೆ. ಮಾತ್ರವಲ್ಲ ಯುವ ಲೇಖಕ ಮರಿಯಮ್ಮನಹಳ್ಳಿಯ ಡಾ. ಹೆಚ್ ಎಸ್ ಗುರುಪ್ರಸಾದ್ ಅವರ ಈ ಲೇಖನದ ಮೂಲಕ
ರಸ ಋಷಿಗೆ ಪ್ರೀತಿಯ ಗೌರವ ನಮನಗಳನ್ನು ಅರ್ಪಿಸುತ್ತದೆ)👇
ಕುವೆಂಪುರವರು ತಮ್ಮ ಸಾಹಿತ್ಯಕೃಷಿಯನ್ನು ಆರಂಭಿಸಿದ್ದು ಮಾತೃಭಾಷೆಯಲ್ಲಿ ಅಲ್ಲ. ಪರಭಾಷೆಯಾದ ಆಂಗ್ಲ ಭಾಷೆಯಲ್ಲಿ. ಅವರ ಒಲವು ಹೆಚ್ಚು ಇಂಗ್ಲೀಷ್ ಭಾಷೆಯತ್ತಲೇ ಇತ್ತು ಇಂತಹ ಸ್ಥಿತಿಯಲ್ಲಿ ಬದಲಾವಣೆಯ ಮನಸ್ಸು ಮೂಡಿಸಿದ ಒಂದು ಘಟನೆ ಕುವೆಂಪುರವರ ಜೀವನದಲ್ಲಿ ನೆಡೆದಿತ್ತು..
ಪುಟ್ಟಪ್ಪನವರು ಮೈಸೂರಿನ ತಮ್ಮ ವಿದ್ಯಾಭ್ಯಾಸ ಸಮಯದಲ್ಲಿ ಹಲವು ಇಂಗ್ಲೀಷ್ ಕವಿಗಳನ್ನು ಅನುಕರಿಸಿ ಬರೆದ ಕವನಗಳನ್ನು ತಮ್ಮ ಶಾಲಾವಾರ್ಷಿಕೋತ್ಸವ ಹಾಗೂ ಹಲವಾರು ಸಮಾರಂಭಗಳಲ್ಲಿ ಓದಿಹೇಳಿ ಗುರುಗಳು, ಸ್ನೇಹಿತರು, ಎಲ್ಲರಿಂದ ಬೇಷ್ ಎನಿಸಿಕೊಳ್ಳುತ್ತಿದ್ದರು, ಇಂತಹ ಪ್ರೋತ್ಸಾಹಕ್ಕೆ ಮಾರುಹೋದ ಪುಟ್ಟಪ್ಪನವರು ಇಂಗ್ಲೀಷ್ ಕವನಗಳ ರಚನೆಯನ್ನೇ ಮುಂದುವರಿಸಿದರು. ತಾವು ಎಸ್.ಎಸ್.ಎಲ್.ಸಿ ಓದುತ್ತಿರುವಾಗ (೧೯೨೨) “ಬಿಗಿನರ್ಸ್ ಮ್ಯೂಸ್” ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದರು. ತಮ್ಮ ಬರವಣಿಗೆಯಿಂದ ಫಲಿಸಿದ ಪ್ರೋತ್ಸಾಹದ ಕಾರಣ ಹೆಚ್ಚು ಇಂಗ್ಲೀಷ್ ಕವನಗಳನ್ನು ರಚಿಸುವತ್ತ ವಾಲಿದರು. ಇದೇ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಪ್ರಸಿದ್ಧ ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಭೇಟಿ ಮಾಡಿ ತಾವು ಬರೆದಿದ್ದ ಕವನಗಳನ್ನು ಅವರಿಗೆ ತೋರಿಸಿದರು, ಕಸಿನ್ಸ್ ರವರು ಪುಟ್ಟಪ್ಪನವರು ಕೊಟ್ಟ ಹಾಳೆಗಳನ್ನು ತಿರುವಿಸಿ ನೋಡಿ ಖಾದಿ ತೊಟ್ಟು ನಿಂತಿದ್ದ ಪುಟ್ಟಪ್ಪನವರತ್ತ ಒಮ್ಮೆ ನೋಡಿದರು.
ಅಸಮಾಧಾನದ ಧ್ವನಿಯಲ್ಲೇ “ಏನಿದೆಲ್ಲ ಕಗ್ಗ ?” (What is all this stuff?)”
“ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತುಗಳೇ ಕಾಣುತ್ತಿವೆ !. ಇದು ಮಾತ್ರ ಸ್ವದೇಶಿಯಲ್ಲ !!. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?” ಎಂದರಂತೆ.
ಅವರ ಇಂಗ್ಲಿಷ್ ಕವನಗಳನ್ನು ನೋಡಿ, ಇತರ ತನ್ನ ಭಾರತೀಯ ಮಿತ್ರರೂ ಅಧ್ಯಾಪಕರೂ ಶ್ಲಾಘಿಸಿದ್ದಂತೆ, ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ಪುಟ್ಟಪ್ಪನವರಿಗೆ ತುಂಬಾ ನಿರಾಶೆಯಾಯಿತು. ಅವರು ಕನ್ನಡದಲ್ಲಿ ಆಗಲೇ `ಅಮಲನ ಕಥೆ’ ಮತ್ತು ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದರಾದರೂ ಅವರ ಪ್ರಶ್ನೆಗೆ ಮರೆತವರಂತೆ ಇಲ್ಲ ಎಂದು ಉತ್ತರಿಸಿದರಂತೆ.
ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಗೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಗೊರರು ಸಾಹಿತ್ಯ ಲೋಕದಲ್ಲಿ ಸೃಜನತೆಯನ್ನು ಸೃಷ್ಠಿಸಿದ್ದಾರೆ. ಅವರ ಹಲವು ಕವನಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರವೂ ಆಗಿದೆ.ನೀವು ನಿಮ್ಮ ಭಾಷೆಯಲ್ಲಿ ಸೃಜನ ಸಾಹಿತ್ಯ ಸೃಷ್ಟಿಸಬಹುದು, ಅಲ್ಲದೆ ಕವಿತೆಯಲ್ಲಿ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲವೆಂದರಂತೆ, ಕೊನೆಗೆ ಕೆಲವು ವಿವೇಕದ ಮಾತನಾಡಿ ಹಸ್ತಪ್ರತಿಯನ್ನು ಪುಟ್ಟಪ್ಪನವರಿಗೆ ಕೊಟ್ಟರಂತೆ. ಕಸಿನ್ಸ್ ಅವರ ಹಿತವಚನದಂತೆ ತನ್ನ ಭಾಷೆಯಾದ ಕನ್ನಡದಲ್ಲಿಯೇ ಬರೆದರೆ ಉತ್ತಮ ಎಂದು ತಿಳಿದು ಹಾಗೂ ಅಂದಿನಿಂದ ಕನ್ನಡದಲ್ಲಿ ಕಾವ್ಯ ರಚಿಸುವ ಸಂಕಲ್ಪ ಪುಟ್ಟಪ್ಪನವರದಾಯಿತು. ಅವರೇ ಹೇಳಿದಂತೆ `ಇದೊಂದು ಐತಿಹಾಸಿಕ ಘಟನೆ’.
ಒಬ್ಬ ಪ್ರಖ್ಯಾತ ವ್ಯಕ್ತಿಯ ಸಾಧನೆ ಹಾಗು ಹೆಸರಿನ ಹಿಂದೆ ಯಾವುದಾದರೊಂದು ಅವಿಸ್ಮರಣೀಯ ಘಟನೆ ಇದ್ದೇ ಇರುತ್ತೆಂಬುದಕ್ಕೆ ಪುಟ್ಟಪ್ಪನವರ ಘಟನೆಯೇ ಒಂದು ಉದಾಹರಣೆ.
ಈ ಘಟನೆಯ ಪ್ರಭಾವದಿಂದಲೇ ಅವರ ಮೊದಲ ಕನ್ನಡ ಕವಿತೆ “ಪೊವು” ರಚನೆಯಾಯಿತು. ಮುಂದೆ ಅವರು ರಚಿಸಿದ ಸಾಹಿತ್ಯದಿಂದಾಗಿ ಕನ್ನಡಿಗರ ಮನದಲ್ಲಿ ರಸ ಋಷಿ ಯಾದರು
#ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
ಮರಿಯಮ್ಮನ ಹಳ್ಳಿ
dr.guruhs@gmail.com