ಅರ್ಜಿಶುಲ್ಕ ಪಡೆದು ಸಂದರ್ಶನ ನಡೆಸದ ಗುವಿವಿ ವಿರುದ್ಧ ಅತಿಥಿ ಉಪನ್ಯಾಸಕರ ಸಂಘ ಆಕ್ರೋಶ

ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಬೀದರ್ ಹಾಗೂ ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅತಿಥಿ ಉಪನ್ಯಾಸಕರ ನೇಮಕಾತಿಗೆ ವಿಶ್ವವಿದ್ಯಾಲಯ ಅಕ್ಟೋಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು.
ಸಂದರ್ಶನದಲ್ಲಿ ಭಾಗವಹಿಸುವ ಉದ್ದೇಶದಿಂದ ಅರ್ಹತೆಯುಳ್ಳ ನೂರಾರು ಅಭ್ಯರ್ಥಿಗಳು ಅರ್ಜಿ ಮತ್ತು ಅರ್ಜಿ ಶುಲ್ಕ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ ಎರಡು ತಿಂಗಳು ಕಳೆದಿದ್ದರೂ ಸಂದರ್ಶನಕ್ಕೆ ಕ್ರಮ ವಹಿಸದ ವಿಶ್ವವಿದ್ಯಾಲಯ, ಅಭ್ಯರ್ಥಿಗಳಿಂದ ಶುಲ್ಕ ಪಾವತಿಸಿಕೊಂಡು ಕುಳಿತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಈ ಮಧ್ಯೆ ರಾಜ್ಯ ಸರ್ಕಾರ ಕಳೆದ ಬಾರಿ ಕಾರ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರನ್ನು ಮುಂದುವರೆಸಿಕೊಳ್ಳುವಂತೆ ವಿಶ್ವವಿದ್ಯಾಲಯಗಳಿಗೆ ಆದೇಶ ನೀಡಿರುವುದರಿಂದ ಅವರಿಗೆ ಮಾತ್ರ ನೇಮಕಾತಿ ಪತ್ರ ನೀಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಯಾವುದೇ ಸೂಚನೆ, ಮಾಹಿತಿ ನೀಡದೇ ತ್ರಿಶಂಕು ಸ್ಥಿತಿಯಲ್ಲಿ ನಿಲ್ಲುವಂತೆ ಮಾಡಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳ ನೇಮಕಾತಿಗೆ ವಿಶ್ವವಿದ್ಯಾಲಯ ಕ್ರಮ ವಹಿಸಬೇಕು ಇಲ್ಲವೇ ಪಡೆದಿರುವ ಅರ್ಜಿಶುಲ್ಕವನ್ನು ಮರುಪಾವತಿ ಮಾಡಬೇಕು ಎಂದು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ವಿಶ್ವವಿದ್ಯಾಲಯದ ಅಡಳಿತ ಮಂಡಳಿಯ ಮನಸ್ಥಿತಿಯ ವಿರುದ್ಧ ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಮತ್ತು ವಿದ್ಯಾರ್ಥಿ ಸಂಘಗಳು ಅಸಮಾಧಾನ ವ್ಯಕ್ತಪಡಿಸಿವೆ.
ಲಾಕ್ಡೌನ್ನಿಂದಾಗಿ ಎಷ್ಟೋ ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಂಥವರಿಂದ ಶುಲ್ಕ ಪಡೆಯುವುದು ಸರಿಯಲ್ಲ. ಬೇರೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಶುಲ್ಕ ಪಡೆಯುವ ಕ್ರಮ ಇಲ್ಲ, ಆದರೆ ಗುವಿವಿ ಮಾತ್ರ ಈ ರೀತಿ ಅರ್ಜಿ ಶುಲ್ಕ ವಸೂಲಿ ಮಾಡುತ್ತಿರುವುದು ದುರದೃಷ್ಟಕರ ಎಂದು ಸಂಘದ ಮುಖಂಡರು ಟೀಕಿಸಿದ್ದಾರೆ.