ಬಳ್ಳಾರಿ: ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ಅನರ್ಘ್ಯರತ್ನ ಎಂದು ಜಿಲ್ಲಾಗ್ರಂಥಾಲಯದ ಉಪನಿರ್ದೇಶಕಿ ಶ್ರೀಮತಿ ಲಕ್ಷ್ಮೀಕಿರಣ ಬಿ.ಕೆ. ಅವರು ತಿಳಿಸಿದರು.
ಶ್ರೀಮಂಜುನಾಥ ಲಲಿತ ಕಲಾ ಬಳಗವು ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ರಸಋಷಿ ಕುವೆಂಪು ಬರೆಯದ ವಿಷಯಗಳೇ ಇಲ್ಲ. ಕುಪ್ಪಳ್ಳಿಯಂತಹ ಜನವಸತಿ ವಿರಳವಿರುವ ಹಳ್ಳಿಯಲ್ಲಿ ಬಾಲ್ಯವನ್ನು ಕಳೆದ ಕುವೆಂಪು ಶ್ರೀ ರಾಮಾಯಣದರ್ಶನಂ ನಂತಹ ಮೇರು ಕಾವ್ಯವನ್ನು ರಚಿಸಬೇಕಾದರೆ ಅವರ ಕಾವ್ಯತಾದ್ಯಾತ್ಮಕತೆಯನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ ಎಂದು ಹೇಳಿದರು.
ಬೃಹತ್ ಕಾದಂಬರಿಗಳ ಜೊತೆಗೆ ಅನೇಕ ಕವನ ಸಂಕಲನಗಳು, ನಾಟಕಗಳನ್ನು ರಚಿಸಿದ ಕುವೆಂಪು ಕನ್ನಡ ಸಾಹಿತ್ಯದ ಅಂತಃಸತ್ವದದ್ಯೋತಕವಾಗಿದ್ಧಾರೆಂದು ಲಕ್ಷ್ಮೀಕಿರಣ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ ರಂಗಣ್ಣನವರ ಮಾತನಾಡಿ, ಕುವೆಂಪು ಸಾಹಿತ್ಯವನ್ನು ಓದುವುದೆಂದರೆ ಮಲೆನಾಡಿನ ಸಿರಿಬನಗಳಲ್ಲಿ ಸಂಚರಿಸಿದ ಅನುಭವವಾಗುತ್ತದೆ ಎಂದು ತಿಳಿಸಿದರು.
‘ನಡೆಮುಂದೆ ನಡೆದಮುಂದೆ ನುಗ್ಗಿ ನಡೆ ಮುಂದೆ, ಜಗ್ಗದೆಯೆಕುಗ್ಗದೆಯೆ ನುಗ್ಗಿ ನಡೆ ಮುಂದೆ, ಎನ್ನುವ ಕವನ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ಒದಗಿಸಿತು ಎಂದು ಹೇಳಿದರು.
ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ಭಾರತವಾಗುದು ಎನ್ನುವ ಕವನವು ಕುರುಕ್ಷೇತ್ರ ಯುದ್ಧವನ್ನು ಕಣ್ಮುಂದೆ ಬರುವಂತೆ ನಿರೂಪಿಸಿದ್ದಾರೆ. ಕವನ ರಚಿಸುವದರ ಜೊತೆಗೆ ಮಕ್ಕಳಿಗಾಗಿ ಅನೇಕ ಕೃತಿಗಳನ್ನು ಬರೆದಿದ್ದಾರೆ.
ಜಾತೀಯತೆ ಮತ್ತು ಮತ ಮೌಢ್ಯವನ್ನು ತೊಲಗಿಸುವಲ್ಲಿ ಕುವೆಂಪು ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಮಾತನಾಡಿ, ಮಕ್ಕಳು ತಮ್ಮ ವಿದ್ಯಾಭ್ಯಾಸದ ಜತೆ ಕಡ್ಡಾಯವಾಗಿ ಸಂಗೀತ, ನೃತ್ಯ, ಚಿತ್ರಕಲೆಯಂತಹ ಲಲಿತ ಕಲೆಗಳನ್ನು ಅಭ್ಯಾಸ ಮಾಡಬೇಕು. ಕಲೆಗಿರುವ ಮೌಲ್ಯವನ್ನು ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರದ ಪ್ರತಿಭಾವಂತರಿಗೆ ಸಮಾಜದಲ್ಲಿ ಗೌರವ ಹೆಚ್ಚು ಎಂದು ಹೇಳಿದರು.
ಜನಪದ ಕಲಾವಿದ ಯಲ್ಲನಗೌಡ ಶಂಕರಬAಡೆ ಅವರು ಕುವೆಂಪು ವಿರಚಿತ ಗೀತೆಯನ್ನು ಹಾಡಿ ಗಮನ ಸೆಳೆದರು.
ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಉಪಸ್ಥಿತರಿದ್ದರು. ಜಾನಪದ ಗಾಯಕ ಹನುಮಯ್ಯ ಮತ್ತು ತಂಡದವರಿAದ ಕುವೆಂಪು ಗೀತಗಾಯನ, ನೃತ್ಯ ಗುರು ಜಿಲಾನಾ ಬಾಷಾ ತಂಡದವರ ಕುವೆಂಪು ಗೀತೆಗಳ ನೃತ್ಯ ಪ್ರದರ್ಶನ ಸಭಿಕರ ಮನಸೂರೆಗೊಂಡವು.
ಅಧ್ಯಾಪಕ ಅಮಾತಿ ಬಸವರಾಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀ ಮಂಜುನಾಥ ಲಲಿತ ಕಲಾ ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದವಾಡ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.