ಹೊಸಪೇಟೆ: ಕಾಶಿಯಲ್ಲಿನ ಪವಿತ್ರ ಆರತಿ ಮಹೋತ್ಸವಂತೆ ತುಂಗಾಭದ್ರ ತಡದಲ್ಲಿ ಆರತಿ ಮಹೋತ್ಸವ ನಡೆಯಲಿ ಎಂದು ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಸಮೀಪದ ತುಂಗಾಭದ್ರ ಸನ್ನಿಧಾನದಲ್ಲಿ ಬುಧವಾರ ಪ್ರತಿ ತಿಂಗಳ ಹುಣ್ಣಿಮೆ ದಿನ ನಡೆಯುವ ತುಂಗಾರತಿ ಹಾಗೂ ಫಲಪೂಜಾ ಮಹೋತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಹಂಪಿಯಲ್ಲಿ ನಡೆಯುವ ತುಂಗಾರತಿ, ತೆಪ್ಪೋತ್ಸವ ಪೂಜಾಕಾರ್ಯವು ಶ್ರೀಗಳ ಸನ್ನಿಧಾನದಲ್ಲಿ ಪಾಲ್ಗೊಂಡಿದ್ದು, ಕಾಶಿಯಲ್ಲಿನ ಪವಿತ್ರ ಆರತಿಯಂತೆ ನಡೆಸಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರಿಗೂ ಶುಭವಾಗಿ ಕಾಲಕಾಲಕ್ಕೆ ಮಳೆ ಬೆಳೆ ಆಗಲೆಂಬುದೇ ಹಾರೈಕೆಯಾಗಿದೆ ಎಂದರು.
ಈ ಬಾರಿಯ ತುಂಗಾರತಿ ಪುಣ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀರಾಮುಲು ಸಹ ಪಾಲ್ಗೊಂಡಿದ್ದರು.
ಮೊದಲಿಗೆ ದೇವಾಲಯದ ಆನೆ ಲಕ್ಷ್ಮಿ ಯ ಆಶೀರ್ವಾದವನ್ನು ಸಚಿವದ್ವಯರು ಪಡೆದುಕೊಂಡು ನಂತರ ಹಂಪಿ ವಿರುಪಾಕ್ಷನ ದರ್ಶನ ಪಡೆದರು.
ನಂತರ ಸಚಿವರು ತುಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಬಾರಿ ತುಂಗಾರತಿ ಜೊತೆಗೆ ವಿಶೇಷವಾಗಿ ಹಂಪಿ ವಿರುಪಾಕ್ಷ ಹಾಗೂ ಪಂಪಾಂಬಿಕ ದೇವಿಯ ಫಲಪೂಜೆ ಮಹೋತ್ಸವ ಜೊತೆಗೆ ತೆಪ್ಪೋತ್ಸವ ನಡೆಸಲಾಗಿದ್ದು, ಬರುವ ಚೈತ್ರ ಪೌರ್ಣಮಿಯಂದು ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ತುಂಗಾರತಿ ಮಹೋತ್ಸವದ ವಿಶೇಷ ಪೂಜೆಗೆ ಸಚಿವರಿಬ್ಬರು ಹಾಜರಿದ್ದು, ತುಂಗಭದ್ರ ನದಿಗೆ ಬಾಗಿನ ಅರ್ಪಿಸಿದರು.
ಫಲಪೂಜಾ ಕಾರ್ಯಕ್ರಮದ ನಂತರ ನಡೆದ ತೆಪ್ಪೋತ್ಸವವನ್ನು ಭಕ್ತಸಮೂಹ ಕಣ್ತುಂಬಿಕೊಂಡಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ,ಹಂಪಿ ಪಿಡಿಓ, ದೇವಸ್ಥಾನದ ಆಡಳಿತ ಮಂಡಳಿ,ಭಕ್ತವೃಂದ ಪಾಲ್ಗೊಂಡಿತ್ತು.