ಮನಂ ಕಾವ್ಯನಾಮದಿಂದ ಜನಪ್ರಿಯರಾಗಿರುವ ಸಾಹಿತಿ ಶ್ರೀ ಎಂ. ನಂಜುಂಡಸ್ವಾಮಿ ಅವರು ಹಿರಿಯ ಪೊಲೀಸ್ ಅಧಿಕಾರಿ. ಪ್ರಸ್ತುತ ಬಳ್ಳಾರಿ ವಲಯದ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆ, ಕತೆ ಬರೆಯುವುದು, ಇವರೇ ರಚಿಸಿದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವುದು ಮನಂ ಅವರಿಗೆ ತುಂಬಾ ಇಷ್ಟ. ಉತ್ತಮ ವಾಗ್ಮಿ, ಇವರ ಭಾಷಣಗಳು ಸಾವಿರಾರು ಅಭಿಮಾನಿಗಳನ್ನು ಹುಟ್ಟು ಹಾಕಿವೆ. ನಾಲ್ಕನೇ ದಿನದ ಅನುದಿನ ಕವನ ದ ಗೌರವಕ್ಕೆ ಮನಂ ಅವರ ‘ನಾನೂ ಚಿಂತಿಸುತ್ತೇನೆ’ ಕವಿತೆ ಪಾತ್ರವಾಗಿದೆ.
*****
ನಾನೂ ಚಿಂತಿಸುತ್ತೇನೆ
ನನ್ನ ತೊರೆದು ಹೋದವರ ಬಗ್ಗೆ ನಾನು ಚಿಂತಿಸುತ್ತೇನೆ, ಚಿಂತಿಸುವುದಿಲ್ಲ ಎಂದು ನಟಿಸಲಾರೆ, ಆದರೆ ನನ್ನ ಚಿಂತನೆಯು ಹುಟ್ಟು ಹಾಕುವ ಪ್ರಶ್ನೆ ಸದಾ ಒಂದೇ ಒಂದು, ನನ್ನ ತೊರೆದವರು ಸುಖವಾಗಿರುವರೇ?
ನನಗೆ ಅವಮಾನಿಸಿದದವರ ಬಗ್ಗೆ ನಾನು ಚಿಂತಿಸುತ್ತೇನೆ, ಚಿಂತಿಸುವುದಿಲ್ಲ ಎಂದು ನಟಿಸಲಾರೆ, ಆದರೆ ನನ್ನ ಚಿಂತನೆಯು ಹುಟ್ಟು ಹಾಕುವ ಪ್ರಶ್ನೆ ಸದಾ ಒಂದೇ ಒಂದು, ನನ್ನ ಅವಮಾನಿಸಿದವರು ಸುಖವಾಗಿರುವರೇ?
ನನಗೆ ತೊಂದರೆ ಕೊಟ್ಟವರ ಬಗ್ಗೆ ನಾನು ಚಿಂತಿಸುತ್ತೇನೆ, ಚಿಂತಿಸುವುದಿಲ್ಲ ಎಂದು ನಟಿಸಲಾರೆ, ಆದರೆ ನನ್ನ ಚಿಂತನೆಯು ಹುಟ್ಟು ಹಾಕುವ ಪ್ರಶ್ನೆ ಸದಾ ಒಂದೇ ಒಂದು, ನನಗೆ ತೊಂದರೆ ಕೊಟ್ಟವರು ಸುಖವಾಗಿರುವರೇ?
ನನ್ನವರ ದೂರ ಮಾಡಿದವರ ಬಗ್ಗೆ ನಾನು ಚಿಂತಿಸುತ್ತೇನೆ, ಚಿಂತಿಸುವುದಿಲ್ಲ ಎಂದು ನಟಿಸಲಾರೆ, ಆದರೆ ನನ್ನ ಚಿಂತನೆಯು ಹುಟ್ಟು ಹಾಕುವ ಪ್ರಶ್ನೆ ಸದಾ ಒಂದೇ ಒಂದು, ನನ್ನವರ ದೂರ ಮಾಡಿಸಿದವರು ಸುಖವಾಗಿರುವರೇ?
ನನ್ನ ತನು-ಮನ-ಧನವ ಕದ್ದವರ ಬಗ್ಗೆ ನಾನು ಚಿಂತಿಸುತ್ತೇನೆ, ಚಿಂತಿಸುವುದಿಲ್ಲ ಎಂದು ನಟಿಸಲಾರೆ, ಆದರೆ ನನ್ನ ಚಿಂತನೆಯು ಹುಟ್ಟು ಹಾಕುವ ಪ್ರಶ್ನೆ ಸದಾ ಒಂದೇ ಒಂದು, ನನ್ನ ತನು-ಮನ-ಧನವ ಕದ್ದವರು ಸುಖವಾಗಿರುವರೇ?
ನನ್ನ ಬಗ್ಗೆ ನಾನು ಚಿಂತಿಸುತ್ತೇನೆ, ಚಿಂತಿಸುವುದಿಲ್ಲ ಎಂದು ನಟಿಸಲಾರೆ, ಆದರೆ ನನ್ನ ಚಿಂತನೆಯು ಹುಟ್ಟು ಹಾಕುವ ಪ್ರಶ್ನೆ ಸದಾ ಒಂದೇ ಒಂದು, ನನ್ನ ಬದುಕಿನಲ್ಲಿ ನಾನು ಬದುಕುವ ಬದುಕು ನನಗೆ ಸುಖಕರವಲ್ಲವೇ?
– ಮನಂ
(ಎಂ.ನಂಜುಂಡಸ್ವಾಮಿ)