ಬಳ್ಳಾರಿ: ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ಸಂಸದರ ಕಚೇರಿಯನ್ನು ನಗರದ ಬುಡಾ ಕಚೇರಿ ಆವರಣದಲ್ಲಿರುವ ಬುಡಾ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ಜಿಲ್ಲೆಯ ಜನರು ತಮ್ಮ ದೂರು-ದುಮ್ಮಾನ ಹೊತ್ತುಕೊಂಡು ಬರುವವರಿಗೆ ತಕ್ಷಣ ಸ್ಪಂದಿಸುವುದಕ್ಕಾಗಿ ಸಂಸದರ ಕಚೇರಿ ಆರಂಭಿಸಲಾಗಿದೆ.
ಡಾ.ಸೈಯದ್ ನಾಸೀರ್ ಹುಸೇನ್ ಅವರು ಸ್ಥಳೀಯವಾಗಿ ಲಭ್ಯವಿದ್ದ ಸಂದರ್ಭದಲ್ಲಿ ಅವರೇ ಸಾರ್ವಜನಿಕರ ಅಹವಾಲುಗಳನ್ನು ಸ್ವತಃ ಆಲಿಸಲಿದ್ದಾರೆ.
ಅವರ ಅನುಪಸ್ಥಿತಿಯಲ್ಲಿ ಕಚೇರಿಯಲ್ಲಿರುವ ಲಭ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಕ್ರಮಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಸೈಯದ್ ನಾಸೀರ್ ಹುಸೇನ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿರುವ ಬುಡಾ ಕಚೇರಿ ಆವರಣದಲ್ಲಿ ಸಂಸದರ ಕಚೇರಿ ಆರಂಭಿಸಲಾಗಿದೆ.
ಜನರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ಒದಗಿಸಲು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕರೆದು ಸಭೆ ನಡೆಸಲು ಈ ಕಚೇರಿ ಆರಂಭಿಸಲಾಗಿದೆ. ನನ್ನ ಅನುದಾನದ ನಿಧಿಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ನನ್ನ ಸ್ವಂತ ಜಿಲ್ಲೆಗೆ ವ್ಯಯಿಸಲಾಗುವುದು ಎಂದರು.
ಲೋಕಸಭಾ ಸದಸ್ಯರಿಗೆ ಕಚೇರಿ ಶಾಶ್ವತವಾಗಿರುತ್ತದೆ. ಆದರೆ ರಾಜ್ಯಸಭಾ ಸದಸ್ಯರಿಗೆ ಈ ಅನುಕೂಲ ಇರುವುದಿಲ್ಲ, ನನ್ನ ಕೋರಿಕೆಗೆ ಸರಕಾರ ಸ್ಪಂದಿಸಿ ಕಚೇರಿ ಆರಂಭಿಸಲು ಒಪ್ಪಿಗೆ ನೀಡಿದ್ದು,ಇಂದು ಕಾರ್ಯಾರಂಭ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ.ನಾಗೇಂದ್ರ, ಈ.ತುಕಾರಾಂ,ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ,ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಮತ್ತಿತರರು ಇದ್ದರು.
—