ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದ ಗೊಂದಲಿ ರಾಮಣ್ಣ ಅವರಿಗೆ 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಸೋಮವಾರ ಚಾಮರಾಜ ನಗರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದರು.
ಅರವತ್ತೆಂಟರ ಹರೆಯದ ರಾಮಣ್ಣ ಅವರಿಗೆ ಗೊಂದಲಿ ಆಟ, ಹಾಡುಗಾರಿಗೆ ತಮ್ಮ ತಂದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೊಂದಲಿ ದೇವೇಂದ್ರಪ್ಪ ಪಾರಗೆ ಅವರಿಂದ ಬಂದ ವಿದ್ಯೆ. ಶೀಲಾವತಿ ಸೇರಿದಂತೆ ಹತ್ತಕ್ಕಿಂತಲೂ ಹೆಚ್ಚು ಗೊಂದಲಿಗರ ಕತೆಗಳನ್ನು ರಾಮಣ್ಣ ಆಕರ್ಷಕವಾಗಿ ಹೇಳಬಲ್ಲರು. ಕತೆ, ಉಪಕತೆಗಳನ್ನು ರಾತ್ರಿ ಪೂರ್ತಿ ಹೇಳುವ ಕಲೆಯೂ ಕರಗತವಾಗಿದೆ. ಹಂಪಾಪಟ್ಟಣ, ಹಗರಿ ಬೊಮ್ಮನಹಳ್ಳಿ ತಾಲೂಕು ಸೇರಿದಂತೆ ಜಿಲ್ಲೆ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪ್ರದರ್ಶನಗಳನ್ನು ನೀಡಿದ್ದಾರೆ.
ತುಂಬಾ ಕುಷಿ ಆಗೈತಿ ರೀ: ಅಕಾಡೆಮಿ ಪ್ರಶಸ್ತಿ ಬಂದಿದ್ದುವನಿಜಕ್ಕೂ ಖುಷಿ ಆಗೈತಿ ರೀ ಸರಾ. ನಮ್ಮೂರಿನವರೇ ಆದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸಿ.ಮಂಜುನಾಥ್ ಅವರು ಕರೆ ಮಾಡಿ ನಿಮಗೆ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಹೇಳಿದಾಗ ತುಂಬಾ ಕುಷಿ ಆಯ್ತು ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ತಮ್ಮ ಸಂತಸ ಹಂಚಿಕೊಂಡರು.
1985ರಲ್ಲಿ ತಮ್ಮ ತಂದೆ ದೇವೇಂದ್ರಪ್ಪ ಅವರಿಗೂ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿತಲ್ಲ ಎಂದು ನೆನಪು ಮಾಡುತ್ತಲೇ ತಮ್ಮ. ತಂದೆಯವರ ನೆನಪಾಗಿ ರಾಮಣ್ಣ ಗದ್ಗಿತರಾದರು. ಬಿಕ್ಕಳಿಸಿದರು. ಸಾವಾರಿಸಿಕೊಂಡು ನನಗೆ ನಮ್ಮ ಸಮಾಜದ ವಿದ್ಯೆ ಕಲಿಸಿದ ನಮ್ಮ ತಂದೆ ಅವರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ ಎಂದು ಭಾವುಕರಾದರು.
ನಮ್ಮಕುಟುಂಬಕ್ಕೆ 35 ವರ್ಷಗಳ ಬಳಿಕ ಮತ್ತೇ ಅಕಾಡೆಮಿ ಪ್ರಶಸ್ತಿ ಬಂದಿರುವುದು ಇಡೀ ಕುಟುಂಬವೇ ಸಂತೋಷದಲ್ಲಿ ಮುಳುಗಿದೆ. ತಂದೆ ಮಗನಿಗೆ ಪ್ರಶಸ್ತಿ ಬಂದಿರುವುದು ಅಪರೂಪ ಎಂದು ಬಲ್ಲವರು ಹೇಳುತ್ತಿರುವುದನ್ನು ಕೇಳಿ ನಿಜಕ್ಕೂ ಖುಷಿ ಜತೆ ಧನ್ಯತೆಯ ಅನುಭವವಾಗುತ್ತಿದೆ ಎಂದು ರಾಮಣ್ಣ ಮನದ ಮಾತು ಹೊರ ಹಾಕಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರಿಗೆ ನಾನು ಕೃತಜ್ಞರಾಗಿರುವೆ. ಕೆಲವು ದಿನಗಳ ಹಿಂದೆ ಅಧ್ಯಕ್ಷರೇ ನನ್ನ ಬಯೋಡಾಟ ತರಿಸಿಕೊಂಡಿದ್ದರು ಎಂದು ತಿಳಿಸಿದರು.
ತಮ್ಮ ಕಲೆಯನ್ನು ಪ್ರೋತ್ಸಾಹಿಸಿದ ಎಲ್ಲಾ ಸಾಂಸ್ಕೃತಿಕ ಮನಸುಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ರಾಮಣ್ಣ ಹೇಳಿದರು.
ಬರುವ ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಚಾಮರಾಜ ನಗರದಲ್ಲಿ ಆಯೋಜಿಸಲಾಗುತ್ತದೆ. ಫೆ. 7 ಅಥವಾ ಬೇರೆ ದಿನಾಂಕದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾಹಿತಿ ನೀಡಿದರು.
ಅಭಿನಂದನೆ: ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಗೊಂದಲಿ ರಾಮಣ್ಣ ಅವರನ್ನು ಪ್ರಸಿದ್ಧ ಸಾಹಿತಿ ಕುಂ.ವೀರಭದ್ರಪ್ಪ, ಹೆಸರಾಂತ ಛಾಯಾಗ್ರಾಹಕ ಶಿವಶಂಕರ ಬಣಗಾರ, ಕನ್ನಡ ಜಾನಪದ ಪರಿಷತ್ತು ಹಗರಿಬೊಮ್ಮನಹಳ್ಳಿ ತಾಲೂಕು ಘಟಕ ಅಧ್ಯಕ್ಷ ಅಂಬಳಿ ಕೇಶವ ಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯ ಬುಡ್ಡಿ ಬಸವರಾಜ್, ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ, ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಸಿ. ಹಾಲೇಶ್ ಮತ್ತಿತರರು ಅಭಿನಂದಿಸಿದ್ದಾರೆ.